ಹಾಸನ, ಜೂ 21 (DaijiworldNews/DB): ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನಸಾಮಾನ್ಯರಿಗೊಂದು ಕಾನೂನಿಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ಗಾಂಯವರನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದರ ಹಿಂದೆ ಯಾರ ಕೈವಾಡವೂ ಇಲ್ಲ. ಕಾಂಗ್ರೆಸ್ನವರು ಈ ಬಗ್ಗೆ ಪ್ರತಿಭಟನೆ ಮಾಡುವ ಅಗತ್ಯವೂ ಇಲ್ಲ. ಅಕ್ರಮ ಹಣ ವರ್ಗಾವಣೆ ಆರೋಪವಿರುವುದರಿಂದ ನಡೆಯುತ್ತಿರುವ ವಿಚಾರಣೆಯನ್ನು ವಿಚಾರಣೆ ಮಾಡಬೇಡಿ ಎಂದು ಹೇಳುವುದಕ್ಕಾಗುತ್ತದೆಯೇ ಎಂದು ಪ್ರಶ್ನಿಸಿದರು.
ಕಾನೂನು, ಕಾಯ್ದೆಗಳನ್ನು ಗೌರವಿಸದೆ ಪ್ರತಿಭಟನೆಗಿಳಿದಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು. ಕಾನೂನನ್ನೇ ಗೌರವಿಸದವರು ಇನ್ನು ಯಾರನ್ನು ತಾನೇ ಗೌರವಿಸುತ್ತಾರೆ ಎಂದ ಅವರು, ತಪ್ಪು ಮಾಡಿದದಿದ್ದರೆ ವಿಚಾರಣೆಗೊಳಪಟ್ಟವರು ಹೊರಗೆ ಬರುತ್ತಾರೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ತನಿಖೆಗಾಗಿ ಉತ್ತಮ ಸಿಐಡಿ ಬ್ಯಾಚ್ನ್ನು ಆಯ್ಕೆ ಮಾಡಟಲಾಗಿದೆ. ಯಾವುದೇ ಮಧ್ಯಪ್ರವೇಶ ಇಲ್ಲದೆ ಪಾರದರ್ಶಕವಾಗಿ ತನಿಖೆ ನಡೆಯಲಿದೆ. ವಂಚನೆ ಎಸಗಿದವರನ್ನು ಜೈಲಿಗೆ ಕಳುಹಿಸುವ ಕೆಲಸ ಆಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಿಂಗ್ಪಿನ್ನ್ನು ಟಚ್ ಮಾಡಿದರೆ ಸರ್ಕಾರ ಬೀಳಬಹುದು ಎಂಬ ಎಚ್ಡಿಕೆ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಹತ ಮಾಹಿತಿ ಏನಾದರೂ ಇದ್ದರೆ ಅವರು ನೀಡಲಿ. ಸರ್ಕಾರ ಹೋದರೂ ಪರವಾಗಿಲ್ಲ ಎಂದಿದ್ದೇನೆ. ಆದರೆ ಹೇಳಿಕೆ ನೀಡಿದವರು ಇದುವರೆಗೆ ಮಾಹಿತಿ ನೀಡಿಲ್ಲ ಎಂದರು.