ಬೆಂಗಳೂರು, ಜೂ 21 (DaijiworldNews/DB): ಮಹಾ ಸರ್ಕಾರದ ವಿರುದ್ದ ಶಾಸಕರೇ ತಿರುಗಿ ಬಿದ್ದಿರುವುದರಿಂದ ಆ ಸರ್ಕಾರ ಪತನವಾದರೆ ಅಚ್ಚರಿ ಪಡಬೇಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಜನ ಮಾತ್ರವಲ್ಲ, ಶಾಸಕರಿಗೂ ಆ ಸರ್ಕಾರದ ಆಡಳಿತ ಸಾಕಾಗಿ ಹೋಗಿದೆ. ಹಾಗಾಗಿ ಸರ್ಕಾರ ತೊಲಗಲಿ ಎಂದು ಅವರೇ ಹೇಳುತ್ತಿದ್ದಾರೆ. ತಾಳಮೇಳವಿಲ್ಲದ ಅಪವಿತ್ರ ಮೈತ್ರಿ ಸರ್ಕಾರ ಅದಾಗಿರುವುದರಿಂದ ಮೂರೂ ಪಕ್ಷದ ಶಾಸಕರು ಭ್ರಮನಿರಸನಗೊಂಡಿದ್ದಾರೆ. ಸೈದ್ದಾಂತಿಕವಾಗಿಯೂ ಮೈತ್ರಿ ಮಾಡಿಕೊಂಡ ಪಕ್ಷಗಳ ನಡುವೆ ಹೋಲಿಕೆ ಇಲ್ಲದ ಕಾರಣ ಸರ್ಕಾರ ಪತನವಾದಲ್ಲಿ ಅಚ್ಚರಿ ಪಡಬೇಕಾದ ಅಗತ್ಯವೇ ಬರುವುದಿಲ್ಲ ಎಂದರು.
ಅಭಿವೃದ್ದಿ ಯೋಜನೆಗಳಿಲ್ಲದ, ಯಾವುದೇ ತತ್ವಗಳಿಲ್ಲದ ಸರ್ಕಾರ ಅದು. ಮೋದಿ, ಫಡ್ನವಿಸ್ ಸರ್ಕಾರ ರಚನೆಯಾಗಬೇಕೆಂಬ ಕಾರಣಕ್ಕೆ ಮಹಾರಾಷ್ಟ್ರ ಜನರು ಬಿಜೆಪಿಗೆ ಮತ ಹಾಕಿದ್ದರು. ಹೀಗಾಗಿ ಆ ರಾಜ್ಯದಲ್ಲಿ ನಮ್ಮ ಪಕ್ಷದ ನಾಯಕರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಸಿ.ಟಿ. ರವಿ ತಿಳಿಸಿದರು.