ಮುಂಬೈ, ಜೂ 21 (DaijiworldNews/DB): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರವುದರ ಹಿಂದೆ ಸಾಲಗಾರರ ಕಿರುಕುಳ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ 25 ಮಂದಿಯ ವಿರುದ್ದ ಪಪ್ರಕರಣ ದಾಖಲಾಗಿದ್ದು, 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರು ಕೆಲವು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದಿದ್ದರು. ಆದರೆ ಬಳಿಕ ಆರೋಪಿಗಳು ಸಾಲ ಮರುಪಾವತಿ ಮಾಡುವಂತೆ ಕುಟುಂಬ ಸದಸ್ಯರಿಗೆ ಆಗಾಗ ತೊಂದರೆ ನೀಡುತ್ತಿದ್ದರು. ಇದರಿಂದ ಬೇಸತ್ತು ಡೆತ್ನೋಟ್ ಬರೆದಿಟ್ಟು ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ಮನೆಗಳಲ್ಲಿ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ.
ಪೋಪಟ್ ಯಲ್ಲಪ್ಪ ವಾನ್ಮೋರೆ (52), ಸಂಗೀತಾ ಪೋಪಟ್ ವಾನ್ಮೋರೆ (48), ಅರ್ಚನಾ ಪೋಪಟ್ ವಾನ್ಮೋರೆ (30), ಶುಭಂ ಪೋಪಟ್ ವಾನ್ಮೋರೆ (28), ಮಾಣಿಕ್ ಯಲ್ಲಪ್ಪ ವ್ಯಾನ್ಮೋರೆ (49), ರೇಖಾ ಮಾಣಿಕ್ ವ್ಯಾನ್ಮೋರೆ (45), ಆದಿತ್ಯ ಮಾಣಿಕ್ ವ್ಯಾನ್ (15), ಅನಿತಾ ಮಾಣಿಕ್ ವ್ಯಾನ್ಮೋರ್ (28) ಮತ್ತು ಅಕ್ಕತೈ ವ್ಯಾನ್ಮೋರ್ (72) ಆತ್ಮಹತ್ಯೆ ಮಾಡಿಕೊಂಡವರು. ಇವರು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದಿದ್ದರೂ, ಸಕಾಲದಲ್ಲಿ ಬಡ್ಡಿ ಪಾವತಿ ಮಾಡುತ್ತಿದ್ದರು. ಆದಾಗ್ಯೂ ಸಾಲ ನೀಡಿದವರು ನಿರಂತರ ಕಿರುಕುಳ ನೀಡುತ್ತಿದ್ದರು. ಸೋಮವಾರ ಬೆಳಗ್ಗೆಯಿಂದ ಎರಡೂ ಮನೆಯಲ್ಲಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಅಕ್ಕಪಕ್ಕದವರು ಬಾಗಿಲು ಒಡೆದು ಒಳಗೆ ಹೋದಾಗ ವಿಷಯ ಗೊತ್ತಾಗಿತ್ತು. ಆರು ಮಂದಿ ಒಂದು ಮನೆಯಲ್ಲಿ, ಮೂವರು ಇನ್ನೊಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಕುಮಾರ್ ಗೆಡಮ್, ಉಪ ಪೊಲೀಸ್ ಅಧೀಕ್ಷಕ ಅಶೋಕ್ ವಿರ್ಕರ್ ಮತ್ತು ಉನ್ನತ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ದುಬುಲೆ ಸೇರಿದಂತೆ ಮೀರಜ್ಗಾಂವ್ ಪೊಲೀಸರ ತಂಡವು ಘಟನೆ ಸ್ಥಳಗಳಿಗೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.