ಹೊಸದಿಲ್ಲಿ, ಜೂ 21 (DaijiworldNews/DB): ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಸುಳ್ಳು ಪ್ರಕರಣ ದಾಖಲಿಸಿ ರಾಜಕೀಯ ದ್ವೇಷ ಸಾಧಿಸುವುದು ಬಿಜೆಪಿಯಿಂದ ಎಂದಿಗೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪಕ್ಷದ ನಾಯಕರಾದ ಸೋನಿಯಾ, ರಾಹುಲ್ ಹಾಗೂ ಎಐಸಿಸಿ ಕಚೇರಿ ಮೇಲೆ ತನಿಖಾ ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ. ಇದು ರಾಜಕೀಯ ದ್ವೇಷಕ್ಕಾಗಿ ಮಾಡುತ್ತಿರುವ ತಂತ್ರವಾಗಿದೆ., ಆದರೆ ಅವರಿಗೆ ಈ ಮಾರ್ಗಗಳಿಂದ ನಮ್ಮ ಧ್ವನಿ ಹತ್ತಿಕ್ಕುವುದು ಅಸಾಧ್ಯದ ಮಾತು ಎಂದರು.
ಎಐಸಿಸಿ ಕಚೇರಿ ನಮಗೆ ದೇವಾಲಯವಿದ್ದಂತೆ. ಅಲ್ಲಿಗೆ ಬರಬಾರದು, ಯಾರೂ ಸೇರುವಂತಿಲ್ಲ ಎನ್ನುತ್ತಾ ಕೇಂದ್ರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. 144 ಸೆಕ್ಷನ್ ಜಾರಿರಿಯ ಅರಿವಿದೆ. ಆದರೆ ಪ್ರತಿಭಟನೆಗೆಂದು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಸೂರ್ಯ ಹುಟ್ಟಿ ಮುಳುಗುವಂತೆ ರಾಜಕೀಯ ಕ್ಷೇತ್ರದಲ್ಲೂ ಆಗುತ್ತಿರುತ್ತದೆ. ಆದರೆ ಇದು ಬಿಜೆಪಿಯವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಅದಕ್ಕಾಗಿ ನಮ್ಮ ನಾಯಕರ ಮೇಲೆ ಅನಗತ್ಯ ಆರೋಪಗಳನ್ನು ಹೊರಿಸುತ್ತಿದ್ದಾರೆ. ನಾವೆಲ್ಲರೂ ನಮ್ಮ ನಾಯಕರೊಂದಿಗೆ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ನಮ್ಮ ನಾಯಕರಿಗೆ ಬೆಂಬಲ ನೀಡಲು ಬಂದಾಗ ಪಕ್ಷದ ಜನಪ್ರತಿನಿಧಿಗಳನ್ನು ಪೊಲೀಸರು ಯಾವ ರೀತಿ ಬಳಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು.
ರಾಹುಲ್ ಗಾಂಧಿಯವರ ವಿಚಾರಣೆಯನ್ನು ದೀರ್ಘ ಕಾಲ ಮಾಡುವುದರ ಹಿಂದೆ ಷಡ್ಯಂತ್ರವಿದೆ. ಆದರೆ ಇದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ನಾವು ಎಲ್ಲವನ್ನು ಎದುರಿಸಿ ಗೆಲ್ಲುತ್ತೇವೆ. ಆಸ್ಪತ್ರೆಯಿಂದ ನಿನ್ನೆ ರಾತ್ರಿಯಷ್ಟೇ ಬಿಡುಗಡೆಯಾದ ಸೋನಿಯಾ ಗಾಂಧಿಯವರನ್ನೂ ಇವತ್ತು ವಿಚಾರಣೆಗೆ ಕರೆದಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವಕ್ಕೆ ಅಗೌರವ ತರುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದವರು ಬಿಜೆಪಿ ವಿರುದ್ದ ಹರಿಹಾಯ್ದರು.
ನ್ಯಾಶನಲ್ ಹೆರಾಲ್ಡ್ ಪ್ರಕರಣ ಮುಗಿದ ಅಧ್ಯಾಯವಾಗಿರುವುದರಿಂದ ವಿಚಾರಣೆಗೆ ಕರೆದಿರುವುದೇ ತಪ್ಪು. ಅದರಲ್ಲಿ ಒಂದು ರೂಪಾಯಿ ಹಣವನ್ನೂ ಅವರು ದುರ್ಬಳಕೆ ಮಾಡಿಕೊಂಡಿಲ್ಲ. ವಿಚಾರಣೆರಗಳು ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಯಾಕೆಂಬುದೇ ನಮ್ಮ ಪ್ರಶ್ನೆ. ಅದಕ್ಕಾಗಿ ನಾವು ಹೋರಾಡುತ್ತಿದ್ದೇವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.