ದಾವಣಗೆರೆ, ಜೂ 21 (DaijiworldNews/DB): ಖಾಸಗಿ ಬಸ್ ಏಜೆಂಟ್ ಒಬ್ಬರನ್ನು ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಚನ್ನಗಿರಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಕೊಲೆಯಾದ ಏಜೆಂಟ್ನನ್ನು ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಎಂದು ಗುರುತಿಸಲಾಗಿದೆ. ಪಟ್ಟಣದ ತರಳಬಾಳು ವೃತ್ತದಲ್ಲಿ ಘಟನೆ ನಡೆದಿದ್ದು, ಕೊಲೆಗೈದ ಆರೋಪಿಯನ್ನು ಸಲೀಂ ಎಂದು ಗುರುತಿಸಲಾಗಿದೆ. ಈತ ಹಮಾಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಶರಣಾಗಿದ್ದಾನೆ.
ಸಲೀಂ ಬೈಕ್ನಲ್ಲಿ ಬಂದು ಏಕಾಏಕಿಯಾಗಿ ಜಾಕೀರ್ಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದಾಗಿ ಜಾಕೀರ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಆದರೆ ಆರೋಪಿ ಆತ ಬಿದ್ದ ಬಳಿಕವೂ ಚಾಕುವಿನಿಂದ ಅಲ್ಲಲ್ಲಿ ಚುಚ್ಚಿ ಕೊಲೆಗೈದಿದ್ದಾನೆ.
ಆಸ್ತಿ ವಿವಾದ ಅಥವಾ ಅನೈತಿಕ ಸಂಬಂಧ ವಿಚಾರದಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಮುಂದುವರಿಸಿದ್ದಾರೆ.