ಹೊಸಪೇಟೆ (ವಿಜಯನಗರ), ಜೂ 21 (DaijiworldNews/DB): ಸೈನ್ಯ ಸೇರಲು ಆಸಕ್ತಿ ಇರುವವರು ಯಾರೂ ಬಸ್, ರೈಲಿಗೆ ಕಲ್ಲು ಹೊಡೆಯುತ್ತಾರೆಯೇ? ಗಲಭೆ ಎಬ್ಬಿಸಿ ಹಿಂಸಾತ್ಮಕ ಕೃತ್ಯ ಎಸಗಿದವರಲ್ಲಿ ಯಾರೂ ಕೂಡಾ ಸೇನೆಗೆ ಅರ್ಜಿ ಸಲ್ಲಿಸಿದವರಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹಂಪಿಯಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿರೋಧಿಸುವುದನ್ನೇ ಕೆಲವರು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ. ಸಮಾಜದ್ರೋಹಿ ಶಕ್ತಿಗಳೂ ಇದರಲ್ಲಿ ಸೇರ್ಪಡೆಯಾಗಿವೆ. ಸೈನಿಕರಾಗಲು ಅರ್ಹರಾಗಿ ಅರ್ಜಿ ಸಲ್ಲಿಸಿದವರು ಯಾರೂ ಗಲಭೆ ಎಬ್ಬಿಸುವುದಿಲ್ಲ. ಮಕ್ಕಳ ಶಾಲಾ ಬಸ್ಗೂ ಕಲ್ಲೆಸೆಯುವುದಿಲ್ಲ ಎಂದರು.
ವಿಶ್ವದ ವಿವಿಧ ದೇಶಗಳಲ್ಲಿ ಅಗ್ನಿಪಥ ಯೋಜನೆ ಜಾರಿಯಲ್ಲಿದೆ. ಸೈನ್ಯ ಯಂಗ್ ಆಗಿರಬೇಕೆಂಬ ಕಾರಣಕ್ಕೆ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಉತ್ತಮ ಪ್ಯಾಕೇಜ್ ಕೂಡಾ ಇದರಲ್ಲಿದೆ. ಪೊಲೀಸ್ ಇಲಾಖೆ, ಸರ್ಕಾರಿ ಆಡಳಿತ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಬಹುದು. ಆದರೆ ಕೆಲವು ರಾಜಕೀಯ ಪಕ್ಷಗಳ ನಾಯಕರು ಮತ್ತು ಸಮಾಜದ್ರೋಹಿಗಳು ಯುವಕರಲ್ಲಿ ಆತಂಕ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಮೋದಿಯವರ ಮುಖಕ್ಕೆ ಮಸಿ ಬಳೆಯಬಹುದು ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ಮೋದಿಯವರು ಎಲ್ಲಾ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿರು. ಹೀಗಾಗಿ ಜನ ಅವರನ್ನು ಎಲ್ಲಾ ಚುನಾವಣೆಗಳಲ್ಲೂ ಬೆಂಬಲಿಸಿದರು. ಆದರೆ ವಿರೋಧ ಮಾಡುತ್ತಾ ಹೋದರೆ ಜನ ಅವರನ್ನು ಎಲ್ಲಿ ಇಡಬೇಕೋ ಅಲ್ಲೇ ಇಡುತ್ತಾರೆ ಎಂದು ವಿಪಕ್ಷಗಳ ವಿರುದ್ದ ಅವರು ಇದೇ ವೇಳೆ ಹರಿಹಾಯ್ದರು.