ಬೆಂಗಳೂರು, ಜೂ 21 (DaijiworldNews/HR): ಕೇಂದ್ರ ಸರ್ಕಾರ ಇನ್ನೂ ನೆರೆ ಪರಿಹಾರ ನೀಡಿಲ್ಲ. ವಸತಿ ಯೋಜನೆಗಳು ಹಳ್ಳ ಹಿಡಿದಿವೆ ಆದರೂ ಡಬಲ್ ಇಂಜಿನ್ ಸರ್ಕಾರಗಳಿಂದ ವಿಕಾಸ್ ಪರ್ವ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಡಬಲ್ ಇಂಜಿನ್ ಸರ್ಕಾರಗಳಿಂದ ವಿಕಾಸ್ ಪರ್ವ - ಪ್ರಧಾನಿ ಮೋದಿ. ನೆರೆ ಪರಿಹಾರವಿಲ್ಲ, ಕೋವಿಡ್ ಪರಿಹಾರ ಇನ್ನೂ ನೀಡಿಲ್ಲ, ವಸತಿ ಯೋಜನೆಗಳು ಹಳ್ಳ ಹಿಡಿದಿವೆ, GST ಬಾಕಿ ಇನ್ನೂ ಕೊಟ್ಟಿಲ್ಲ, ರಸ್ತೆ ಗುಂಡಿಗಳನ್ನು ಮುಚ್ಚುವವರಿಲ್ಲ, ವಿಕಾಸವಿರುವುದು 40% ಕಮಿಷನ್ನಲ್ಲಿ ಮಾತ್ರ! ಲಜ್ಜೆ ಬಿಟ್ಟವರು ಮಾತ್ರ ಸುಳ್ಳನ್ನು ಸುಲಲಿತವಾಗಿ ಹೇಳಬಲ್ಲರು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಪ್ರಧಾನಿಯವರೇ, ನಿಮ್ಮಿಂದ ನ್ಯಾಯ ಸಿಗಬಹುದೆಂದು 40% ಕಮಿಷನ್ ಕಿರುಕುಳದ ಬಗ್ಗೆ ನಿಮ್ಮದೇ ಪಕ್ಷದ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರ ಬರೆದಿದ್ದರು, ನೀವು ಸ್ಪಂದಿಸದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದಿಲ್ಲವೇ? 40% ಕಮಿಷನ್ ನಿಗ್ರಹಿಸುವ ಮನಸಿಲ್ಲವೇ? ಎಂದು ಪ್ರಶ್ನಿಸಿದೆ.