ಬೆಂಗಳೂರು, ಜೂ 20 (DaijiworldNews/MS): ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ? ಮುಂದೆ ಇವರು ಬಿಜೆಪಿ ಕಚೇರಿಯ ಬಾಗಿಲು ಕಾಯಬೇಕೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಅಗ್ನಿಪಥ ಯೋಜನೆಯಲ್ಲಿ 4 ವರ್ಷ ಅವಧಿ ಪೂರೈಸಿ ಸೇವೆಯಿಂದ ನಿರ್ಗಮಿಸುವ ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಲು ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಅವರು, ಅಗ್ನಿಪಥ್ ವಿರುದ್ದ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯ ಹೇಳಿಕೆಗಳು ಅವರ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರು ಬಿಜೆಪಿ ಕಚೇರಿ ಕಾಯುವ ಗಾರ್ಡ್ ಆಗಲು ಆದ್ಯತೆ ಎಂದಿರುವ ಕೈಲಾಶ್ ವಿಜಯವರ್ಗೀಯ ಹೇಳಿಕೆ ಖಂಡನೀಯ.ಈ ಹೇಳಿಕೆ ಯುವ ಸಮುದಾಯ ಮಾತ್ರವಲ್ಲ ಇಡೀ ಸೈನ್ಯಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ? ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆಬಿಜೆಪಿ ಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ? ಎಂದು ಪ್ರಶ್ನಿಸಿದ್ದಾರೆ.
ಇತ್ತ ಜ್ಞಾನೇಂದ್ತ ಅರಗ ಅವರು ಅಗ್ನಿಪಥ್ ವಿರುದ್ಧ ಬೀದಿಗೆ ಬಿದ್ದಿರುವ ಯುವಕರನ್ನು ಪುಂಡರು ಎಂದಿದ್ದಾರೆ. ಜ್ಞಾನೇಂದ್ರರವರೆ, ಸೈನ್ಯಕ್ಕೆ ಸೇರುವುದಾಕ್ಕಾಗಿಯೇ ಲಕ್ಷಾಂತರ ಯುವಕರು ತಪ್ಪಸ್ಸಿನಂತೆ ಶ್ರಮ ಪಟ್ಟಿರುತ್ತಾರೆ. ಆ ಯುವಕರಿಗೆ ಕೇವಲ 4 ವರ್ಷ ಕೆಲಸ ಕೊಟ್ಟು, ನಂತರ ಮನೆಗೆ ಕಳಿಸಿದರೆ ಅವರೇನು ಮಾಡಬೇಕು? ಯುವಕರು ಪ್ರತಿಭಟಿಸುವುದು ತಪ್ಪೆ ಎಂದು ಕೇಳಿದ್ದಾರೆ.