ನವದೆಹಲಿ, ಜೂ 20 (DaijiworldNews/MS): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ವರ್ಗಾವಣೆಯಲ್ಲಿ ಸಂಬಂಧಿಸಿ ಈಗಾಗಲೇ ಮೂರು ಬಾರಿ ವಿಚಾರಣೆ ಎದುರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಸೋಮವಾರ) ಮತ್ತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.
ಜೂನ್ 13ರಿಂದ 15ರ ವರೆಗೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಅವರಿಗೆ ಮತ್ತೊಂದು ಸಮನ್ಸ್ ನೀಡಿದ್ದ ಜಾರಿ ನಿರ್ದೇಶನಾಲಯ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸುಮಾರು 30 ಗಂಟೆಗಳಿಗೂ ಹೆಚ್ಚಿನ ಕಾಲ ಅವರನ್ನು ಪ್ರಶ್ನೆ ಮಾಡಿತ್ತು.
ನಂತರ ತಮ್ಮ ಹುಟ್ಟುಹಬ್ಬ ಹಾಗೂ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿರುವ ತಾಯಿ ಸೋನಿಯಾ ಗಾಂಧಿಯವರನ್ನು ನೋಡಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಶುಕ್ರವಾರದ ಬದಲಿಗೆ ಬೇರೆ ದಿನಾಂಕ ನೀಡುವಂತೆ ರಾಹುಲ್ ಕೋರಿದ್ದರು. ಇದರಂತೆ ಮೂರು ದಿನಗಳ ಅವಕಾಶ ನೀಡಿ ಸೋಮವಾರಕ್ಕೆ ವಿಚಾರಣೆ ನಿಗದಿಪಡಿಸಿದ್ದರು.
ಇದೀಗ ಜಾರಿ ನಿರ್ದೇಶನಾಲಯ ನೀಡಿರುವ ಅವಧಿ ಮುಗಿದಿದ್ದು, ಇಂದು ಹಾಜರಾಗಬೇಕಿದೆ.