ನವದೆಹಲಿ, ಜೂ 19 (DaijiworldNews/SM): ಅಫ್ಘಾನಿಸ್ತಾನದ ಗುರುದ್ವಾರದ ಮೇಲೆ ಉಗ್ರ ದಾಳಿ ಹಿನ್ನೆಲೆಯಲ್ಲಿ ಅಲ್ಲಿರುವ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿಗೆ ಭಾರತ ಸರಕಾರ ಇ-ವೀಸಾ ನೀಡಿದೆ.
ನಿನ್ನೆ ಶನಿವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಗರದಲ್ಲಿ ಗುರುದ್ವಾರವೊಂದರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಕಾಬೂಲ್ ಬಳಿಯ ಬಾಗ್-ಎ ಬಾಲಾ ಪ್ರದೇಶದಲ್ಲಿರುವ ಕಾರ್ತೆ ಪರವಾನ್ ಗುರುದ್ವಾರದಲ್ಲಿ ಶನಿವಾರ ಎಸಗಲಾದ ಬಾಂಬ್ ಸ್ಫೋಟಗಳಲ್ಲಿ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ. ಸತ್ತವರಲ್ಲಿ ಸಿಖ್ ಧರ್ಮೀಯ ವ್ಯಕ್ತಿಯೊಬ್ಬರೂ ಇದ್ದಾರೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಇದು ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಪಕ್ಷದವರು ಮಾಡಿದ ಅವಹೇಳನಕಾರಿ ಹೇಳಿಕೆಗಳಿಗೆ ಪ್ರತೀಕಾರವಾಗಿ ನಡೆದ ದಾಳಿ ಎಂದು ಐಸಿಸ್ ಹೇಳಿದೆ. ಕೆಲ ದಿನಗಳ ಹಿಂದೆಯೇ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಅಫ್ಗಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿಸಿ ಪ್ರತೀಕಾರದ ದಾಳಿ ಎಸಗುವುದಾಗಿ ಹೇಳಿತ್ತು. ಅದು ಎಚ್ಚರಿಕೆ ಕೊಟ್ಟಂತೆಯೇ ಶನಿವಾರ ದಾಳಿಯಾಗಿದೆ.