ನವದೆಹಲಿ, ಜೂ 19 (DaijiworldNews/DB): ಬೆಂಕಿ ಹಚ್ಚುವಿಕೆ, ಹಿಂಸಾತ್ಮಕ ಕೃತ್ಯಗಳಿಗೆ ನಮ್ಮಲ್ಲಿ ಜಾಗವಿಲ್ಲ. ಅಗ್ನಿವೀರ್ ಬ್ಯಾಚ್ ಸಂಖ್ಯೆ 1ರ ನೋಂದಣಿ ಪ್ರಕ್ರಿಯೆಯು ಜೂನ್ 24 ರಿಂದ ಆರಂಭಗೊಳ್ಳಲಿದೆ ಎಂದು ಸೇನಾ ನಾಯಕರು ತಿಳಿಸಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹಾಗೂ ಏರ್ ಮಾರ್ಷಲ್ ಎಸ್ ಕೆ ಝಾ, ಆಯ್ಕೆಗೆ ಆನ್ಲೈನ್ ಪರೀಕ್ಷೆ ನಡೆಯಲಿದೆ. ಜುಲೈ 24 ರಿಂದ ಒಂದನೇ ಹಂತದ ಆನ್ಲೈನ್ ಪರೀಕ್ಷೆ ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷಾಂತ್ಯಕ್ಕೆ ಮೊದಲ ಬ್ಯಾಚ್ ದಾಖಲಾಗಲಿದ್ದು, ಡಿಸೆಂಬರ್ 30 ರೊಳಗೆ ತರಬೇತಿಯೂ ಆರಂಭವಾಗುತ್ತದೆ. ಯುವಕ-ಯುವತಿಯರಿಗೆ ಅಗ್ನಿವೀರ್ಗಳಾಗಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆ ಶಿಸ್ತಿಗೆ ಹೆಸರುವಾಸಿ. ಯಾವುದೇ ವ್ಯಕ್ತಿ ಪ್ರತಿಭಟನೆ, ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬ ಪ್ರಮಾಣ ಪತ್ರ ನೀಡಬೇಕು. ಎಫ್ಐಆರ್ ಅವರ ಹೆಸರಿನಲ್ಲಿ ಇದ್ದರೆ, ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅಂತಹವರಿಗೆ ಅವಕಾಶವಿಲ್ಲ. ಪೊಲೀಸರ ಪರಿಶೀಲನೆ ಬಳಿಕವೇ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ ಎಂದರು.
ಈಗಾಗಲೇ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ‘ಅಗ್ನಿವೀರ’ ಮೀಸಲಾತಿ ಘೋಷಣೆಗಳನ್ನು ಮಾಡಿವೆ. ಅವೆಲ್ಲವೂ ಪೂರ್ವಯೋಜಿತವೇ ಆಗಿದ್ದು, ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಮಾಡಿರುವ ಘೋಷಣೆಗಳಲ್ಲ. ಸಾಮಾನ್ಯ ಸೈನಿಕರಿಗೆ ಅನ್ವಯವಾಗುವ ಸಿಯಾಚಿನ್ ಮತ್ತು ಇತರ ಪ್ರದೇಶಗಳಲ್ಲಿ ಅಗ್ನಿವೀರ್ಗಳು ಸಮಾನ ಭತ್ಯೆ ಪಡೆಯಲಿದ್ದಾರೆ. ಅಲ್ಲದೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಮೊದಲ ನೌಕಾಪಡೆ ‘ಅಗ್ನಿವೀರ್ಸ್’ ಒಡಿಶಾದ ಐಎನ್ ಯಸ್ ಚಿಲ್ಕಾ ತರಬೇತಿ ಸಂಸ್ಥೆಯಲ್ಲಿ ನವೆಂಬರ್ 21 ರಿಂದ ಪ್ರಾರಂಭಿಸಲಾಗುತ್ತದೆ. ಪ್ರಸ್ತುತ ನೌಕಾಪಡೆಯಲ್ಲಿ 30 ಮಹಿಳಾ ಅಧಿಕಾರಿಗಳಿದ್ದಾರೆ. ಅಗ್ನಿಪಥ್ ಯೋಜನೆಯಡಿ ಮಹಿಳೆಯರನ್ನೂ ನೇಮಕ ಮಾಡಿ, ಅವರನ್ನು ಯುದ್ದ ನೌಕೆಗಳಲ್ಲಿಯೂ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಅಗ್ನಿಪಥ್ ಯೋಜನೆಯ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದ್ದಾರೆ.
ಡಿಸೆಂಬರ್ತಿಂಗಳಾರಂಭಕ್ಕೆ ಮೊದಲ ಬ್ಯಾಚ್ನ 25,000 ‘ಅಗ್ನಿವೀರ್’ಗಳನ್ನು ನಾವು ಪಡೆಯಲಿದ್ದೇವೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ಎರಡನೇ ಬ್ಯಾಚ್ನ್ನು ಸೇರ್ಪಡೆಗೊಳಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನಪ್ಪ ತಿಳಿಸಿದ್ದಾರೆ.
ಅಗ್ನಿಪಥ’ ಯೋಜನೆಯ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ಸೇನಾ ಮುಖ್ಯಸ್ಥರನ್ನು ಭಾನುವಾರ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಬಳಿಕ ಸೇನಾ ನಾಯಕರು ಸುದ್ದಿಗೋಷ್ಠಿ ನಡೆಸಿ ಅಗ್ನಿಪಥ್ ಕುರಿತು ಮಾಹಿತಿ ನೀಡಿದರು.