ನವದೆಹಲಿ, ಜೂ 19 (DaijiworldNews/HR): ಗುಪ್ತಚರ ಏಜೆಂಟ್ನಂತೆ ನಟಿಸಿ ಭಾರತಕ್ಕೆ ಬರುವ ವಿದೇಶಿಯರ ಬ್ಯಾಗ್ಗಳನ್ನು ತಪಾಸಣೆ ಮಾಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಹಾಗೂ ಮಾದಕ ವಸ್ತು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇರಾನ್ ಪ್ರಜೆಯೊಬ್ಬನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತನನ್ನು ಆಗ್ನೇಯ ದೆಹಲಿಯ ಲಜಪತ್ ನಗರದಲ್ಲಿ ವಾಸವಾಗಿರುವ ಹೊಸೈನ್ ರೆಜಾಫರ್ಡ್ ಅಹ್ಮದ್(46) ಎಂದು ಗುರುತಿಸಲಾಗಿದೆ.
ವೈದ್ಯಕೀಯ ವೀಸಾದ ಮೇಲೆ ಮೇ 21 ರಂದು ಇರಾನ್ನಿಂದ ಭಾರತಕ್ಕೆ ಬಂದಿದ್ದ ಆರೋಪಿ ಇಲ್ಲಿ ಇಬ್ಬರೊಂದಿಗೆ ಸ್ನೇಹ ಬೆಳೆಸಿದ್ದು, ಸದ್ಯಕ್ಕೆ ಆ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಇನ್ನು ಆರೋಪಿಗಳು ವೈದ್ಯಕೀಯ ವೀಸಾದಲ್ಲಿ ದೆಹಲಿಗೆ ಬರುವ ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡುವವರ ಚಲನವಲನವನ್ನು ಪತ್ತೆಹಚ್ಚುತ್ತಿದ್ದರು, ನಂತರ ಅವರನ್ನು ಹಿಂಬಾಲಿಸುತ್ತಿದ್ದರು. ಜೂನ್ 16 ರಂದು ಲಜಪತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಯೊಬ್ಬರು ತಮ್ಮ ಪತ್ನಿಯೊಂದಿಗೆ ಗ್ರೇಟರ್ ಕೈಲಾಶ್ನ ಆಸ್ಪತ್ರೆಯಿಂದ ಮನೆಗೆ ಹಿಂದಿರುಗುವಾಗ ಇದ್ದಕ್ಕಿದ್ದಂತೆ ಮೂವರು ಕಾರಿನಲ್ಲಿ ಬಂದು ಅವರನ್ನು ಅಡ್ಡಗಟ್ಟಿ ತಮ್ಮನ್ನು ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಆರೋಪಿಗಳು ತಪಾಸಣೆ ನೆಪದಲ್ಲಿ ಅವರ ಬ್ಯಾಗ್ಗಳಲ್ಲಿ ಹಣವನ್ನು ಕದ್ದಿದ್ದಾರೆ.
ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮಾರವನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದು, ಈ ಗ್ಯಾಂಗ್ ಗುಪ್ತದಳದ ಏಜೆಂಟ್ರೆಂಬ ನೆಪದಲ್ಲಿ ಹಲವು ವಿದೇಶಿ ಪ್ರಜೆಗಳನ್ನು ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.