ಕಲಬುರಗಿ, ಜೂ 19 (DaijiworldNews/DB): ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ದ ದೆಹಲಿಯ ಜಂತರ್ಮಂತರ್ನಲ್ಲಿ ಕೆಲವೇ ದಿನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಯೋಜನೆ ಜಾರಿಗೆ ಮುನ್ನ ಸರ್ಕಾರ ಜನಸಾಮಾನ್ಯರ ವಿಶ್ವಾಸ ಪಡೆದುಕೊಳ್ಳಬೇಕು.ಅಗ್ನಿಪಥದಂತಹ ಯೋಜನೆ ಜಾರಿಗೆ ಮುನ್ನ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದರೆ ಅದನ್ನು ಮಾಡಿಲ್ಲ ಎಂದರು.
ರೈಲಿಗೆ ಬೆಂಕಿ ಹಚ್ಚಲು, ಹಿಂಸಾಚಾರ ಮಾಡಲು ಯಾರೂ ಹೇಳುವುದಿಲ್ಲ, ಅದು ಒಪ್ಪಿತ ಪ್ರತಿಭಟನೆಯ ಕ್ರಮವೂ ಅಲ್ಲ. ಆದರೆ ಯುವಕರು ಆಕ್ರಮಣಕಾರಿಗಳು ಯಾಕಾಗುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಅವರನ್ನು ಸಮಾಧಾನಪಡಿಸುವ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಬೇಕು ಎಂದವರು ಸಲಹೆ ಮಾಡಿದರು.
ಈ ಯೋಜನೆಯಡಿ ಕೇವಲ ನಾಲ್ಕು ವರ್ಷ ದುಡಿದರೆ ಆತುತ್ತಮ ಸೈನಿಕನಾಗಲೂ ಸಾಧ್ಯವಿಲ್ಲ, ಅರ್ಧದಷ್ಟು ತರಬೇತಿಯೂ ಸಿಕ್ಕಿರುವುದಿಲ್ಲ. ಅಲ್ಲದೆ, ಇದು ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಿಸಿಕೊಂಡಂತೆ ಆಗುತ್ತದೆ. ಕೂಡಲೇ ಸರ್ಕಾರಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.