ತುಮಕೂರು, ಜೂ 19 (DaijiworldNews/HR): ಡಿ.ಕೆ.ಶಿವಕುಮಾರ್ ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪಠ್ಯಪುಸ್ತಕದ ಬಗ್ಗೆ ಯಾವುದೇ ಹೇಳಿಕೆ ನೀಡುವ ಮುನ್ನ ಪರಿಷ್ಕೃತ ಪಠ್ಯಪುಸ್ತಕ ಓದಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೆಂಗಳೂರು, ಮೈಸೂರು ಅಂದ ತಕ್ಷಣ ಟಿಪ್ಪುವಿನ ಬಗ್ಗೆ ಹೇಳುತ್ತಾರೆ. ಟಿಪ್ಪು ಕನ್ನಡದವರಾ? ಅವರದ್ದು ಪರ್ಶಿಯನ್, ಉರ್ದು ಭಾಷೆ. ಅವರ ಕತ್ತಿಯ ಮೇಲೆಯೂ ಉರ್ದುವಿನಲ್ಲಿ ಬರೆದಿದ್ದರು ಎಂದರು.
ಇನ್ನು ಟಿಪ್ಪು ಎಂದೂ ಕನ್ನಡವನ್ನು ಒಪ್ಪಿಕೊಂಡಿಲ್ಲ. ಲಕ್ಷಾಂತರ ಜನರನ್ನು ಮತಾಂತರ ಮಾಡಿದ್ದರು. ಅವರನ್ನು ವೈಭವೀಕರಿಸಲಾಗಿತ್ತು. ಈಗ ಮೊದಲ ಬಾರಿಗೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಬಗ್ಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.