ಬೆಂಗಳೂರು, ಜೂ 19 (DaijiworldNews/DB): ಅಗ್ನಿಪಥ ವಿಚಾರವಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಸಶಕ್ತ ಯುವಶಕ್ತಿ ರೂಪಿಸುವ ಮೂಲಕ ದೇಶದ ಸೇನಾ ವ್ಯವಸ್ಥೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಸೇನಾ ಪರೀಕ್ಷೆ ಬರೆದವರಿಗೆ ಆತಂಕ ಇದ್ದರೂ, ಅದನ್ನು ನಿವಾರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ. ಯೋಜನೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಪ್ರತಿಭಟನೆ, ಸಾರ್ವಜನಿಕ ಸಂಪತ್ತು ಹಾನಿ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಅಂತಹವರಿಗೆ ಬೆಂಬಲಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಈಗಾಗಲೇ ಅದನ್ನು ಪಬ್ಲಿಕ್ ಡೊಮೇನ್ನಲ್ಲಿ ಹಾಕಲಾಗಿದ್ದು, ಯಾವುದೇ ಲೋಪವಿದ್ದರೆ ಸಾರ್ವಜನಿಕರು ಮುಕ್ತವಾಗಿ ತಿಳಿಸಲು ಅವಕಾಶವಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಸಂಜೆ ಮೈಸೂರಿನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆಗಳೂ ಪೂರ್ಣಗೊಂಡಿವೆ ಎಂದರು.