ಹೈದರಾಬಾದ್, ಜೂ 19 (DaijiworldNews/DB): ಪ್ರತಿರೂಪದ ಹಿಂಸೆಯನ್ನು ಖಂಡಿಸುವುದು ನನ್ನ ಉದ್ದೇಶವೇ ಹೊರತು ಬೇರೇನಲ್ಲ ಎಂದು ಕಾಶ್ಮೀರಿ ಪಂಡಿತರ ಹತ್ಯೆ ಕುರಿತ ತನ್ನ ಹೇಳಿಕೆ ವಿವಾದವಾದ ಬೆನ್ನಲ್ಲೇ ನಟಿ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೇಳಿಕೆಯನ್ನು ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಹಿಂಸೆಯನ್ನು ಖಂಡಿಸಿದ್ದೇನೆಯೇ ಹೊರತು, ಧರ್ಮದ ಕುರಿತಾಗಲೀ, ಮನುಷ್ಯರ ಕುರಿತಾಗಲೀ ಮಾತನಾಡಿಲ್ಲ. ಯಾವುದೇ ಧರ್ಮವಾದರೂ ಹಿಂಸೆ ಮಾಡುವುದು ಸಲ್ಲ ಎಂದು ಹೇಳಿದ್ದೇನೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಯೊಬ್ಬರ ಜೀವವೂ ಅಮೂಲ್ಯ. ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಜೀವದ ಬೆಲೆ ವೈದ್ಯಕೀಯ ಪದವಿ ಪಡೆದ ನನಗೆ ಗೊತ್ತು. ಎಲ್ಲ ಜೀವಗಳೂ ಸಮಾನ ಮತ್ತು ಮುಖ್ಯ ಎಂಬುದೇ ನನ್ನ ನಂಬಿಕೆ ಎಂದಿದ್ದಾರೆ.
ತಮ್ಮ ಹೊಸ ಚಿತ್ರ 'ವಿರಾಟ ಪರ್ವಂ' ಕುರಿತು ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದ ವೇಳೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಗೋ ಹಂತಕರ ಹತ್ಯೆಗೆ ಹೋಲಿಸಿ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಗೋ ರಕ್ಷಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಜರಂಗದಳದ ಮುಖಂಡರು ಹೈದರಾಬಾದ್ನಲ್ಲಿ ನಟಿಯ ವಿರುದ್ದ ದೂರು ದಾಖಲಿಸಿದ್ದಾರೆ.