ಮಂಗಳೂರು, ಜೂ 18 (DaijiworldNews/HR): ದೇಶದ ರಾಷ್ಟ್ರಪತಿಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ.
ರಾಜ್ಯಸಭೆಯ ಸೆಕ್ರೆಟರಿ ಜನರಲ್ ಹಾಗೂ 2022ರ ಭಾರತದ ರಾಷ್ಟ್ರಪತಿಗಳ ಅಧಿಕಾರ ಪದದ ಚುನಾವಣಾಧಿಕಾರಿ ಪಿ.ಸಿ. ಮೋಡಿ, ಕೊಠಡಿ ಸಂಖ್ಯೆ-29, ನೆಲ ಅಂತಸ್ತು, ಸಂಸತ್ ಭವನ, ನವದೆಹಲಿ ಈ ಕಚೇರಿಯಲ್ಲಿ ಅಥವಾ ಅವರು ಅನಿವಾರ್ಯವಾಗಿ ಗೈರು ಹಾಜರಾಗಿದ್ದರೆ ಸಹಾಯಕ ಚುನಾವಣಾಧಿಕಾರಿಯಾಗಿರುವ ವಿಶೇಷ ಕರ್ತವ್ಯಾಧಿಕಾರಿ (ಓಎಸ್ಡಿ) ಮುಕುಲ್ ಪಾಂಡೆ ಅಥವಾ ರಾಜ್ಯ ಸಭಾ ಸಚಿವಾಲಯದ ಮುಖ್ಯ ಜಾಗೃತಿ ಅಧಿಕಾರಿ ಹಾಗೂ ಜಂಟಿ ಕಾರ್ಯದರ್ಶಿ ಸುರೇಂದ್ರ ಕುಮಾರ್ ತ್ರಿಪಾಠಿ ಅವರಿಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ ಯಾವುದೇ ದಿನ 2022ರ ಜೂ. 29ರೊಳಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬಹುದು.
ನಾಮಪತ್ರದೊಂದಿಗೆ ಅಭ್ಯರ್ಥಿಯು ಮತದಾರನೆಂದು ನೋಂದಾಯಿತನಾಗಿರುವ ಸಂಸತ್ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಗೆ ಸಂಬಂಧಪಟ್ಟ ನಮೂದಿನ ಒಂದು ಪ್ರಮಾಣೀಕೃತ ಪ್ರತಿ ಲಗತ್ತಿಸಬೇಕು.
ಅಭ್ಯರ್ಥಿಯು ಹದಿನೈದು ಸಾವಿರ ರೂಪಾಯಿಗಳ ಮೊಬಲಗನ್ನು ಠೇವಣಿ ಮಾಡಬೇಕು. ಈ ಮೊಬಲಗನ್ನು ನಾಮಪತ್ರ ಸಾದರ ಪಡಿಸುವ ಕಾಲಕ್ಕೆ ಚುನಾವಣಾಧಿಕಾರಿಯ ಬಳಿ ನಗದಾಗಿ ಠೇವಣಿ ಮಾಡಬಹುದು ಅಥವಾ ಮುಂಚಿತವಾಗಿ ಆ ಮೊಬಲಗನ್ನು ಭಾರತದ ರಿಸರ್ವ್ ಬ್ಯಾಂಕಿನಲ್ಲಿ ಅಥವಾ ಸರ್ಕಾರಿ ಖಜಾನೆಯಲ್ಲಿ ಠೇವಣಿ ಮಾಡಬಹುದು. ನಂತರದಲ್ಲಿ ಆ ಮೊಬಲಗನ್ನು ಹಾಗೆ ಠೇವಣಿ ಮಾಡಲಾಗಿದೆ ಎಂದು ತೋರಿಸುವ ರಸೀದಿಯನ್ನು ನಾಮಪತ್ರಕ್ಕೆ ಲಗತ್ತಿಸಬೇಕು, ನಾಮಪತ್ರದ ನಮೂನೆಗಳನ್ನು ಕೊಠಡಿ ಸಂಖ್ಯೆ-29, ನೆಲ ಅಂತಸ್ತು, ಸಂಸತ್ ಭವನ, ನವದೆಹಲಿ, ಇಲ್ಲಿಂದ ಪಡೆದುಕೊಳ್ಳಬಹುದು.
ನಾಮಪತ್ರಗಳನ್ನು 2022ರ ಜೂ.30ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಪರಿಶೀಲಿಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಭ್ಯರ್ಥಿ ಅಥವಾ ಅವರ ಸೂಚಕರು ಅಥವಾ ಅನುಮೋದಕರ ಪೈಕಿ ಯಾರಾದರೊಬ್ಬರು ಚುನಾವಣಾಧಿಕಾರಿಗೆ 2022ರ ಜುಲೈ2ರ ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ನೋಟೀಸ್ ಸಲ್ಲಿಸಬಹುದು.
ಚುನಾವಣೆಗೆ ಸ್ಪರ್ಧೆ ನಡೆಯುವ ಸಂದರ್ಭದಲ್ಲಿ 2022ರ ಜುಲೈ 18ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರಗೆ ನಿಯಮಗಳಂತೆ ನಿಗದಿಯಾದ ಮತದಾನದ ಸ್ಥಳಗಳಲ್ಲಿ ಮತದಾನ ನಡೆಸಲಾಗುವುದು ಎಂದು ರಾಜ್ಯ ಸಭೆಯ ಸೆಕ್ರೆಟರಿ ಜನರಲ್ ಆಗಿರುವ ಭಾರತದ ರಾಷ್ಟ್ರಪತಿಯವರ ಅಧಿಕಾರ ಪದದ ಚುನಾವಣೆ-2022 ಚುನಾವಣಾಧಿಕಾರಿ ಪಿ.ಸಿ. ಮೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.