ನವದೆಹಲಿ, ಜೂ 18 (DaijiworldNews/DB): ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ಒಟ್ಟು 369 ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
210 ಮೇಲ್/ಎಕ್ಸ್ಪ್ರೆಸ್ ಹಾಗೂ 159 ಲೋಕಲ್ ಪ್ಯಾಸೆಂಜರ್ ರೈಲುಗಳ ಓಡಾಟ ತಾತ್ಕಾಲಿಕವಾಗಿ ರದ್ದಾಗಿದೆ. ಇದರೊಂದಿಗೆ ಎರಡು ಮೇಲ್/ಎಕ್ಸ್ಪ್ರೆಸ್ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಕೇಂದ್ರ ಜಾರಿಗೊಳಿಸಲು ಉದ್ದೇಶಿಸಿರುವ ಅಗ್ನಿಪಥ ಯೋಜನೆ ವಿರುದ್ದ ಉತ್ತರಪ್ರದೇಶ, ಬಿಹಾರ ಸೇರಿದಂತೆ ದೇಶದ ಏಳಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ತೀವ್ರಗೊಂಡಿದೆ. ಉತ್ತರ ಪ್ರದೇಶ, ಬಿಹಾರ ಮುಂತಾದೆಡೆ ರೈಲು ನಿಲ್ದಾಣ, ರೈಲುಗಳಿಗೆ ಹಾನಿಗೊಳಿಸಿರುವ ಪ್ರಕರಣ ನಡೆದಿದೆ. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ರೈಲು ಸೇವೆಯನ್ನು ಇಲಾಖೆ ರದ್ದುಗೊಳಿಸಿದೆ.