ನವದೆಹಲಿ, ಜೂ 18 (DaijiworldNews/DB): ಎನ್ಸಿಪಿ ನಾಯಕ ಶರದ್ ಪವಾರ್ ಬಳಿಕ ಇದೀಗ ಎನ್ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲ ಅವರೂ ವಿಪಕ್ಷಗಳು ನೀಡಿದ ರಾಷ್ಟ್ರಪತಿ ಅಭ್ಯರ್ಥಿ ಅವಕಾಶದಿಂದ ಹಿಂದೆ ಸರಿದಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ವಿಪಕ್ಷಗಳು ಶನಿವಾರ ಆಯ್ಕೆ ಮಾಡಿದ್ದವು. ಆದರೆ ಸಂಜೆ ವೇಳೆಗೆ ಅವರು ತಾನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಮುನ್ನಡೆಸುವುದೇ ನನ್ನ ಕನಸು. ತಮ್ಮ ಹೆಸರನ್ನು ಪ್ರಸ್ತಾಪಿಸಿದಕ್ಕಾಗಿ ವಿಪಕ್ಷ ನಾಯಕರುಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನನ್ನ ಹೆಸರು ಪ್ರಸ್ತಾಪಿಸಿದ ಬಳಿಕ ನನಗೆ ಬೆಂಬಲ ನೀಡಿ ಹಲವಾರು ಮಂದಿ ವಿಪಕ್ಷ ನಾಯಕರುಗಳು ಕರೆ ಮಾಡಿದ್ದಾರೆ. ದೇಶದ ಉನ್ನತ ಹುದ್ದೆಗೆ ನನ್ನನ್ನು ಪರಿಗಣಿಸಿ ನನಗೆ ನೀಡಿದ ಬೆಂಬಲಕ್ಕೆ ನಾನು ಆಭಾರಿ. ಆದರೆ ನನ್ನ ಪ್ರಯತ್ನ ಜಮ್ಮು ಕಾಶ್ಮೀರದಲ್ಲಿ ಇರಬೇಕು. ಯಾಕೆಂದರೆ ಜಮ್ಮು ಕಾಶ್ಮೀರವು ನಿರ್ಣಾಯಕ ಘಟ್ಟದಲ್ಲಿ ಹಾದು ಹೋಗುತ್ತಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಈ ಹಿಂದೆ ವಿಪಕ್ಷಗಳು ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಅವರು ಈ ಅವಕಾಶದಿಂದ ಹಿಂದೆ ಸರಿದಿದ್ದರಿಂದ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರು ಪ್ರಚಲಿತದಲ್ಲಿತ್ತು. ಇದೀಗ ಫಾರೂಕ್ ಅಬ್ದುಲ್ಲ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ವಿಪಕ್ಷಗಳಿಗೆ ಅವರೂ ಹಿಂದೆಸರಿದಿರುವುದರಿಂದ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ.