ಬೆಂಗಳೂರು, ಜೂ 18 (DaijiworldNews/DB): ಕನ್ನಡ ಚಿತ್ರರಂಗದ ಯುವ ನಟ ಸತೀಶ್ ವಜ್ರ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದಿದೆ.
ಸತೀಶ್ ಅವರ ಮನೆಯಲ್ಲಿಯೇ ಘಟನೆ ನಡೆದಿದ್ದು, ಆತನ ಭಾಮೈದನೇ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಕಾರಣ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದ್ದರೂ, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆರ್.ಆರ್.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ಮದ್ದೂರಿನವರಾದ ಸತೀಶ್ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಪ್ರೀತಿಸಿ ವಿವಾಹವಾಗಿದ್ದ ಅವರ ಪತ್ನಿ ಕಳೆದ ಮೂರು ತಿಂಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಆತ್ಮಹತ್ಯೆಗೆ ಪತಿ ಸತೀಶ್ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಇಂದು ಸತೀಶ್ ಅವರ ಹತ್ಯೆಯಾಗಿದೆ.