ನವದೆಹಲಿ, ಜೂ 18 (DaijiworldNews/HR): ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಶೇ.10ರಷ್ಟು ಹುದ್ದೆಗಳನ್ನು ಅಗ್ನಿವೀರರಿಗೆ ಮೀಸಲಿಡುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ನಾಗರಿಕ ಹುದ್ದೆಗಳು ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗುವುದು ಎಂದಿದೆ.
ಈ ಮೀಸಲಾತಿಯು ಮಾಜಿ ಸೈನಿಕರಿಗೆ ಅಸ್ತಿತ್ವದಲ್ಲಿರುವ ಮೀಸಲಾತಿಯ ಜೊತೆಗೆ ಇರುತ್ತದೆ. ಈ ನಿಬಂಧನೆಗಳನ್ನ ಜಾರಿಗೆ ತರಲು ಸಂಬಂಧಿತ ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.
ಇನ್ನು ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ನೇಮಕಾತಿ ನಿಯಮಗಳಿಗೆ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲು ಸಲಹೆ ನೀಡಲಾಗುವುದು. ಅಗತ್ಯ ವಯೋಮಿತಿ ಸಡಿಲಿಕೆಯನ್ನು ಸಹ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.