ಹುಬ್ಬಳ್ಳಿ, ಜೂ 18 (DaijiworldNews/DB): ಜನಪರ. ಹೋರಾಟಕ್ಕೆ ತೊಡಗಿಸಿಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರು, ಸೋನಿಯಾ, ರಾಹುಲ್ಗೆ ಸಂಕಷ್ಟ ಎದುರಾದ ತತ್ಕ್ಷಣ ಬೀದಿಗಿಳಿದಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.
ಮಿಷನ್ ಮೋದಿ ಅಗೇನ್ ಪಿಎಂ ಹಾಗೂ ಎಸ್.ಎಸ್. ಶೆಟ್ಟರ್ ಫೌಂಡೇಷನ್ ಹುಬ್ಬಳ್ಳಿ ನಗರದಲ್ಲಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಎರಡು ದಿನಗಳ ಕಾರ್ಯಾಗಾರ 'ಮಿಷನ್ ಮೋದಿ'ಗೆ ಚಾಲನೆ ನೀಡಿ ಶನಿವಾರ ಅವರು ಮಾತನಾಡಿದರು.
ಎರಡು ಸಾವಿರ ಕೋಟಿ ರೂ.ಗಳ ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚಿಸಿದ ಕೂಡಲೇ ಕಾಂಗ್ರೆಸ್ಸಿಗರಿಗೆ ನಡುಕ ಶುರುವಾಗಿದೆ. ಆರೋಪ ಹೊತ್ತಿರುವವರ ಪರವಾಗಿ ಹೋರಾಟಕ್ಕಿಳಿದಿರುವವರು ಎಂತಹ ಸಂದೇಶ ರವಾನಿಸಬಹುದು? ಪ್ರಕರಣದಲ್ಲಿ ಸೋನಿಯಾ, ರಾಹುಲ್ ಪಾತ್ರ ಅಲ್ಲದಿದ್ದರೆ ಕಾನೂನಾತ್ಮಕ ಹೋರಾಟ ನಡೆಸಬೇಕೇ ವಿನಃ ಬೀದಿ ಹೋರಾಟ ಮಾಡುವುದಲ್ಲ ಎಂದವರು ಕಾಂಗ್ರೆಸ್ಸಿಗರ ಪ್ರತಿಭಟನೆಯನ್ನು ಟೀಕಿಸಿದರು.
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕನಾಗಲೀ, ಬಿಜೆಪಿಯನ್ನು ಮೀರಿಸುವ ಇನ್ನೊಂದು ಪಕ್ಷವಾಗಲೀ ದೇಶದಲ್ಲಿ ಇಲ್ಲ. ಮೋದಿಯವರ ಎಂಟು ವರ್ಷಗಳ ಉತ್ತಮ ಆಡಳಿತ, ಜನಪರ ಯೋಜನೆಗಳು ದೇಶದ ಜನರ ಬದುಕಿನ ರೀತಿಯನ್ನೇ ಬದಲಾಯಿಸಿದೆ ಎಂದವರು ಅಭಿಪ್ರಾಯಪಟ್ಟರು.