ಬೆಂಗಳೂರು, ಜೂ 18 (DaijiworldNews/DB): ಎಟಿಎಂ ಯಂತ್ರಗಳನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ರಾತ್ರಿ ವೇಳೆ ಹಣ ಕಳವುಗೈದು ಪರಾರಿಯಾಗುತ್ತಿದ್ದ ಕಳ್ಳನೊಬ್ಬನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪಂಜಾಬ್ ಮೂಲದ ಸಮರ್ಜಿತ್ ಸಿಂಗ್ (36) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ. ಕಳ್ಳತನದ ಆರೋಪದಲ್ಲಿ ಜೈಲು ಸೇರಿದ್ದ ಈತ ಕಳೆದ ಡಿಸೆಂಬರ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಇದೀಗ ಮತ್ತೆ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾನೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಚಿಕ್ಕಸಂದ್ರದ ಸಪ್ತಗಿರಿ ಕಾಲೇಜು ರಸ್ತೆಯ ಕೆನರಾ ಬ್ಯಾಂಕ್ನ ಎಟಿಎಂ ಬಳಿ ಕಳೆದ ನಾಲ್ಕೈದು ದಿನಗಳಿಂದ ಈತನ ಚಲನವನಗಳನ್ನು ಏಜೆನ್ಸಿಯವರು ಗಮನಿಸುತ್ತಿದ್ದರು. ರಾತ್ರಿ ವೇಳೆಗೆ ಶಟರ್ ಮುಚ್ಚುವುದು, ಮುಂಜಾನೆ ಶೆಟರ್ ತೆಗೆದು ಎಟಿಎಂ ಪರಿಶೀಲನೆ ನಡೆಸುತ್ತಿರುವುದು ಮಾಡುತ್ತಿದ್ದ. ಜೂ.9ರಂದು ಬೆಳಗ್ಗೆ ಲ್ಯಾನ್ ಕೇಬಲನ್ನು ಕಟ್ ಮಾಡಿದ್ದ. ಅದಕ್ಕೂ ಮೊದಲು ಜಾಮ್ ಆಗಿದ್ದ ಕಾರ್ಡ್ ರೀಡರ್ನ್ನೂ ಸರಿಪಡಿಸಿದ್ದ. ಇದರಿಂದ ಅನುಮಾನಗೊಂಡ ಏಜೆನ್ಸಿಯವರು ಸನಿಹದ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಅಪರಿಚತನೊಬ್ಬನ ಕೈಚಳಕ ಗೊತ್ತಾಗಿದೆ. ತತ್ಕ್ಷಣ ಸೋಲದೇವನ ಹಳ್ಳಿ ಪೊಲೀಸ್ ಠಾಣೆಗೆ ಏಜೆನ್ಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ರಾತ್ರಿ ಕನ್ನ ಕಳವು ಪ್ರಯತ್ನ ಮತ್ತು ಶಸ್ತ್ರ ಕಾಯ್ದೆಯಡಿ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಆತ ತನ್ನ ಸಹಚರರೊಂದಿಗೆ ಪಂಜಾಬ್ನಿಂದ ಬಂದು ಎಟಿಎಂಗೆ ಕನ್ನ ಹಾಕುವ ಕೆಲಸವನ್ನು ಮಾಡಿಕೊಂಡಿದ್ದ ಎಂಬುದೂ ಗೊತ್ತಾಗಿದೆ. ಇದಕ್ಕಾಗಿ 2019ರಿಂದಲೇ ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಪರಪ್ಪನ ಅಗ್ರಹಾರ ಠಾಣೆಯಲ್ಲಿ1, ಜಾಲ ಹಳ್ಳಿಯಲ್ಲಿ1, ಸುಬ್ರಮಣ್ಯಪುರದಲ್ಲಿ1 ಎಟಿಎಂ ಕೇಂದ್ರದಲ್ಲಿ ರಾತ್ರಿ ಕನ್ನ ಕಳವು ಪ್ರಕರಣ ಹಾಗೂ ಮೈಕೋಲೇ ಔಟ್ನಲ್ಲಿ1, ಚನ್ನಮ್ಮಕೆರೆ ಅಚ್ಚುಕಟ್ಟುವಿನಲ್ಲಿ1 ರಾತ್ರಿ ಕನ್ನ ಕಳವು ಪ್ರಯತ್ನ ಪ್ರಕರಣ (ಎಟಿಎಂ ಕೇಂದ್ರ), ಬ್ಯಾಟರಾಯನಪುರ ಠಾಣೆಯಲ್ಲಿ1 ಎಟಿಎಂನಲ್ಲಿ ರಾತ್ರಿ ಕನ್ನ ಕಳವು ಮಾಡುವಾಗ ಕೊಲೆ ಯತ್ನ ಮತ್ತು ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿದೆ.
ಆರೋಪಿಯಿಂದ 5 ಕೆ.ಜಿ. ತೂಕದ ಒಂದು ಗ್ಯಾಸ್ ಸಿಲಿಂಡರ್, ಪೈಪ್ ಒಳಗೊಂಡ ಒಂದು ಗ್ಯಾಸ್ ಕಟ್ಟರ್, ಒಂದು ಏರ್ ಫಿಲ್ಟರ್ ಮಾಸ್ಕ್, ಒಂದು ಟೈರ್ ಲಿವರ್, ಒಂದು ಆಕ್ಸಿಜನ್ ಸಿಲಿಂಡರ್ ಕೀ, ಒಂದು ಏಷಿಯನ್ ಪೈಂಟ್ ಸ್ಟ್ರೈ, ಒಂದು ಚಾಕು, ಒಂದು ಲೈಟರ್, ಒಂದು ಕಬ್ಬಿಣದ ರಿಂಚ್-, ಒಂದು ವೈರ್ ಕಟರ್, ಒಂದು ಕಬ್ಬಿಣದ ಕತ್ತಿ, 10 ಲೀಟರ್ನ ಆಕ್ಸಿಜನ್ 2 ಸಿಲಿಂಡರ್ಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.