ನವದೆಹಲಿ, ಜೂ 18 (DaijiworldNews/DB): ಕೃಷಿ ಕಾನೂನುಗಳನ್ನು ಹಿಂಪಡೆದಂತೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನೂ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜೈ ಜವಾನ್, ಜೈ ಕಿಸಾನ್ ಮೌಲ್ಯಗಳಿಗೆ ಪ್ರಧಾನಿಯಿಂದ ಅಪಮಾನಾಗುತ್ತಿದೆ. ಕಳೆದ ವರ್ಷ ಮೂರು ಕೃಷಿ ಕಾನೂನು ಹಿಂಪಡೆದು ಮೋದಿ ರೈತರ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ರೈತರ ನಿರಂತರ ಪ್ರತಿಭಟನೆಯೇ ಕಾರಣ. ಈ ಬಾರಿಯೂ ಯುವಕರಲ್ಲಿ ಕ್ಷಮೆಯಾಚಿಸಿ ಅಗ್ನಿ ಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದಿದ್ದಾರೆ.
ಕಪ್ಪು ಕೃಷಿ ಕಾಯ್ದೆ ವಾಪಸ್ಸಾತಿಗೆ ಅಂದು ಹೇಗೆ ಒತ್ತಾಯಿಸಿದ್ದೆನೋ, ದೇಶದ ಯುವಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗ್ನಿಪಥ್ ಯೋಜನೆಯನ್ನೂ ಕೈ ಬಿಡಬೇಕೆಂದು ಈಗ ಒತ್ತಾಯಿಸುತ್ತಿದ್ದೇನೆ. ಆ ಮೂಲಕ ಯುವಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.