ಬೆಂಗಳೂರು, ಜೂ 18 (DaijiworldNews/DB): ಎಚ್.ಡಿ. ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ದೇವೇಗೌಡರ ಹೆಸರು ಆ ಹುದ್ದೆಗೆ ಪ್ರಸ್ತಾಪವೇ ಆಗಿಲ್ಲ. ಆದರೂ ಅವರು ಸ್ಪರ್ಧಿಸುತ್ತಾರೆಂಬ ಸುದ್ದಿಗಳು ಹರಡಿವೆ ಎಂದರು.
ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಸ್ಪರ್ಧೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯವರು ಸಭೆಗೆ ಆಹ್ವಾನ ನೀಡಿದ್ದಾರೆ. ಆ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಗಿದೆ. ದೇವೇಗೌಡರ ಹೆಸರು ಅಲ್ಲಿ ಪ್ರಸ್ತಾಪವಾಗಿಲ್ಲ. ಅವರು ಸ್ಪರ್ಧಿಸುವುದೂ ಇಲ್ಲ. ಅಲ್ಲದೆ, ಇನ್ನೂ ಪ್ರತಿಪಕ್ಷಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ. ಜೂನ್ 20ರಂದು ಇನ್ನೊಂದು ಸುತ್ತಿನ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ಆಯ್ಕೆ ನಡೆಯಬಹುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸಬೇಕೆಂಬ ಆಸೆ ದೇವೇಗೌಡರಿಗಿದೆ. ಅವರ ಆ ಆಸೆಯನ್ನು ಪೂರೈಸುವುದಕ್ಕಾಗಿ ನಾವು ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಅಂತಹ ಆಸೆಯ ಹೊರತಾಗಿ ರಾಷ್ಟ್ರಪತಿಯಾಗಬೇಕೆಂಬ ಯಾವುದೇ ಆಸೆ, ಆಕಾಂಕ್ಷೆಗಳು ಇಲ್ಲ ಎಂದು ಎಚ್ಡಿಕೆ ಸ್ಪಷ್ಟನೆ ನೀಡಿದರು.