ನವದೆಹಲಿ, ಜೂ 18 (DaijiworldNews/DB): ಅಗ್ನಿವೀರರಿಗೆ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಅಗ್ನಿಪಥ್ ಯೋಜನೆ ಜಾರಿಗೊಳಿಸಬಾರದೆಂದು ಒತ್ತಾಯಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಗೃಹ ಸಚಿವಾಲಯವು ಟ್ವೀಟ್ ಮಾಡಿ ಈ ಮಹತ್ವದ ಘೋಷಣೆ ಮಾಡಿದೆ.
ಸಿಎಪಿಎಫ್ಗಳು ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ಮೀಸಲಾತಿ ಇರುತ್ತದೆ. ಜೊತೆಗೆ ನೇಮಕಾತಿಗಾಗಿ ಅಗ್ನಿವೀರ್ಗಳಿಗೆ ಇರುವ ಗರಿಷ್ಠ ವಯಸ್ಸಿನ ಮಿತಿಯಿಂದ ಮೂರು ವರ್ಷಗಳ ಸಡಿಲಿಕೆಯನ್ನೂ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವಾಲಯವು ಭರವಸೆ ನೀಡಿದೆ. ಇದರೊಂದಿಗೆ ಮೊದಲ ಬ್ಯಾಚ್ನ ಅಗ್ನಿವೀರರಿಗೆ ವಯಸ್ಸಿನ ಸಡಿಲಿಕೆಯು ನಿಗದಿಗೊಳಿಸಿದ ಗರಿಷ್ಠ ವಯಸ್ಸಿನ ಮಿತಿಗಿಂತ ಐದು ವರ್ಷಗಳವರೆಗೆ ಇರುತ್ತದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ, ಉತ್ತರಪ್ರದೇಶ, ತೆಲಂಗಾಣ, ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಬಗ್ಗೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಸಿಸಿಟಿವಿ ದಾಖಲೆಗಳು, ವೀಡಿಯೋ, ಫೋಟೋಗಳನ್ನು ನೋಡಿಕೊಂಡು ಹಿಂಸಾತ್ಮಕ ಕೃತ್ಯ ಎಸಗಿದವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಂದೂ ಕೂಡಾ ವಿವಿಧೆಡೆ ಹಿಂಸಾಚಾರ ಮುಂದುವರಿದಿದ್ದು, ಬಿಹಾರದ ಜೆಹಾನಾಬಾದ್ನ ತೆಹ್ತಾ ಬಜಾರ್ನಲ್ಲಿ ಬೆಳ್ಳಂಬೆಳಗ್ಗೆ ಕಲ್ಲು ತೂರಾಟ ನಡೆದಿದೆ. ಅಲ್ಲದೆ, ಇಲ್ಲಿ ಟ್ರಕ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.