ನವದೆಹಲಿ, ಜೂ 17 (DaijiworldNews/MS): ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಉತ್ತರ ಭಾರತದ 8 ಪ್ರಮುಖ ರಾಜ್ಯಗಳು ಹಾಗೂ ದಕ್ಷಿಣ ಭಾರತದಲ್ಲಿ ತೆಲಂಗಾಣ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಸೇನಾ ನೇಮಕಾತಿಯ ಹೊಸ ನಿಯಮ ಅಗ್ನಿಪತ್ಗೆ ಪ್ರಬಲ ವಿರೋಧ ವ್ಯಕ್ತವಾಗಿದ್ದು, ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನಾ ಕಿಚ್ಚಿಗೆ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ತೆಲಂಗಾಣ, ಹರ್ಯಾಣ ಸೇರಿದಂತೆಹಲವು ಕಡೆಗಳಲ್ಲಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಬಿಹಾರ, ಮಧ್ಯಪ್ರದೇಶ, ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶ, ದೆಹಲಿ, ಉತ್ತರಖಂಡ್ ಸೇರಿದಂತೆ ಹಲವು ಭಾಗಗಳಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಪರಿಸ್ಥಿತಿ ನಿಯಂತ್ರಿಸಲು ಹಲವು ಕಡೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಸಿಕಂದರಾಬಾದ್ನಲ್ಲಿಯೂ ಶುಕ್ರವಾರ ಗಲಾಟೆ ಮುಂದುವರಿದಿದ್ದು ಉದ್ರಿಕ್ತ ಗುಂಪು ರೈಲ್ವೆ ಜಂಕ್ಷನ್ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಮೂಲಕ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಆದರೆ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಗುಂಡು ಹಾರಿಸಬೇಕಾಯಿತು. ಘಟನೆಯಲ್ಲಿ ಒರ್ವ ವ್ಯಕ್ತಿ ಮೃತನಾಗಿದ್ದು, 8 ಮಂದಿ ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತನಾದ ವ್ಯಕ್ತಿಯನ್ನು ದಾಮೋದರ್ ಕುರಶಿಯಾ ಎನ್ನಲಾಗಿದೆ.