ಬೆಂಗಳೂರು, ಜೂ 17 (DaijiworldNews/MS): ಖರ್ಗೆ ಅವರೇ ಅಪಾಯದ ಕತ್ತಿ ನಿಮ್ಮ ತಲೆ ಮೇಲಿದೆ ಎಂದು ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತು ಭಾರತೀಯ ಜನತಾ ಪಕ್ಷ ಎಚ್ಚರಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ "ತನ್ನ ಕುಟುಂಬಕ್ಕೆ ನಿಷ್ಠರಾಗಿದ್ದವರನ್ನೂ ರಾಹುಲ್ ಗಾಂಧಿ ತೇಜೋವಧೆ ಮಾಡುತ್ತಿದ್ದಾರೆ. ಸತ್ತವರ ತಲೆಗೆ ಹಗರಣ ಕಟ್ಟುವ ಹುನ್ನಾರ ನಡೆಯುತ್ತಿದೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಗರಣವನ್ನು ಮರಣ ಹೊಂದಿರುವ ಮೋತಿಲಾಲ್ ವೋರಾ ತಲೆಗೆ ಕಟ್ಟಲು ಷಡ್ಯಂತ್ರ ನಡೆಸಲಾಗುತ್ತಿದೆ. ನಾನು ಕೂಡಾ ರಾಹುಲ್ ಗಾಂಧಿ ಎಂದು ಬೊಬ್ಬಿರಿಯುವ ನಕಲಿ ವೀರರೇ ನಿಮಗಿದೋ ಎಚ್ಚರಿಕೆ. ಖರ್ಗೆ ಅವರೇ, ಅಪಾಯದ ತೂಗುಗತ್ತಿ ನಿಮ್ಮ ತಲೆ ಮೇಲಿದೆ ಎಂದು ಟೀಕಿಸಿದೆ.
ಇಡಿ ವಿಚಾರಣೆ ಸಂದರ್ಭದಲ್ಲಿ ನ್ಯಾಶನಲ್ ಹೆರಾಲ್ಡ್ ಅವ್ಯವಹಾರವನ್ನೆಲ್ಲಾ ಮೋತಿಲಾಲ್ ವೋರಾ ತಲೆಗೆ ಕಟ್ಟಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಹಗರಣಕ್ಕೆ ವೋರಾ ಕಾರಣ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಪಲಾಯನವಾದ. ಗತಿಸಿ ಹೋದವರನ್ನು ಬಲಿಪಶು ಮಾಡುವ ಹುನ್ನಾರವೇ? ಕೋತಿ ತಿಂದು ಮೇಕೆ ಮೂತಿಗೆ ಒರೆಸಿದ ಕತೆಯಂತೆ ನ್ಯಾಶನಲ್ ಹಗರಣ ಸಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಮಾಡಿದ ಭ್ರಷ್ಟಾಚಾರವನ್ನು ಮರಣ ಹೊಂದಿದ ವೋರಾ ತಲೆಗೆ ಕಟ್ಟುತ್ತಿರುವುದೇಕೆ ಎಂದು ಪ್ರಶ್ನಿಸಿದೆ.