ನೆಲ್ಲೂರು, ಜೂ 17 (DaijiworldNews/MS): ತನ್ನ 3 ವರ್ಷದ ಮಗಳನ್ನು ದುಷ್ಟ ಶಕ್ತಿ ದೂರ ಓಡಿಸುವುದಕ್ಕಾಗಿ ವಿವಿಧ ಪೂಜೆಗೆ ಒಳಪಡಿಸಿ , ಕೊನೆಗೆ ಆಕೆಯ ಸಾವಿಗೆ ಕಾರಣವಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ನೆಲ್ಲೂರಿನಲ್ಲಿ ಈ ಘಟನೆ ನಡೆದಿದ್ದು 32 ವರ್ಷದ ಆರೋಪಿ ತಂದೆ ವೇಣುಗೋಪಾಲ್ ನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನಲೆ:
ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದು ವೇಣುಗೋಪಾಲ್ ಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಲು ದುಷ್ಟ ಶಕ್ತಿಗಳ ಕಾರಣವೆಂದು ಅದನ್ನು ಓಡಿಸಲು ಬುಧವಾರ ಮನೆಯಲ್ಲಿ ಪೂಜೆ ಏರ್ಪಡಿಸಿದ್ದ.
ಅತೀಂದ್ರಿಯ ಶಕ್ತಿಯ ಆಚರಣೆಯ ಭಾಗವಾಗಿ, ವೇಣುಗೋಪಾಲ್ ತನ್ನ ಮಗಳ ಮೇಲೆ ಅರಿಶಿನ ನೀರನ್ನು ಸುರಿದು ನಂತರ ಕುಂಕುಮವನ್ನು ತನ್ನ ಮಗಳು ಪುನರ್ವಿಕಾ ಬಾಯಿಗೆ ತುರುಕಿದ್ದಾನೆ. ಕುಂಕುಮದ ಪುಡಿ ಬಾಯಿಗೆ ತುಂಬಿಸಿದ್ದ ಪರಿಣಾಮ ಮಗುವಿಗೆ ಉಸಿರುಗಟ್ಟಿಲಾರಂಬಿಸಿದೆ. ಹೆಣ್ಣು ಮಗುವಿನ ಅಳಲು ಕೇಳಿದ ಅಕ್ಕಪಕ್ಕದವರು ದೌಡಾಯಿಸಿ ಆಕೆಯನ್ನು ರಕ್ಷಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಅದೇ ದಿನ ಆಕೆಯನ್ನು ಚೆನ್ನೈನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಗದೆ ಗುರುವಾರ ಬೆಳಗ್ಗೆ ಮಗು ಸಾವನ್ನಪ್ಪಿದೆ.
ಸ್ಥಳೀಯರ ಪ್ರಕಾರ, ಆರೋಪಿ ತಂದೆ ವೇಣುಗೋಪಾಲ್ ಮಣ್ಣು ತೆಗೆಯುವ ವ್ಯಾಪಾರ ಮಾಡುತ್ತಿದ್ದು, ದುಷ್ಟ ಶಕ್ತಿಗಳಿಂದಾಗಿ ನಷ್ಟವನ್ನು ಅನುಭವಿಸಿದ್ದರು. ಮತ್ತು, ದುಷ್ಟ ಶಕ್ತಿಗಳನ್ನು ತೊಡೆದುಹಾಕಲು ಅವನು ತನ್ನ ಅವಳಿ ಹೆಣ್ಣುಮಕ್ಕಳಲ್ಲಿ ಅತೀಂದ್ರಿಯ ಪ್ರಯೋಗ ನಡೆಸಿದ್ದ.