ಬೆಂಗಳೂರು, ಜೂ 17 (DaijiworldNews/MS): ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದ ಬಳಿಕ ನಡೆದ ಮರುಮೌಲ್ಯಮಾಪನ ನಂತರ ಮತ್ತೆ 72 ವಿದ್ಯಾರ್ಥಿಗಳು 625 ಅಂಕ ಗಳಿಸಿದ್ದು , ಹೀಗಾಗಿ ಈ ಬಾರಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 217 ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಎಸೆಸೆಲ್ಸಿ ಫಲಿತಾಂಶ ಪ್ರಕಟವಾದಾಗ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ದಾಖಲೆ ಬರೆದಿದ್ದರು. ಆದರೆ ಇದೀಗ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮರುಮೌಲ್ಯಮಾಪನ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಮತ್ತೆ 72 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಎಚ್.ಎನ್, ಈ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರ ಬಗ್ಗೆ ನಾವು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಮತ್ತು ಮುಂದಿನ ಕ್ರಮಕ್ಕಾಗಿ ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಕಳುಹಿಸಲಾಗುವುದು . ಇದಲ್ಲದೆ ಅಂಕಗಳಲ್ಲಿನ ವ್ಯತ್ಯಾಸವು ಆರು ಮತ್ತು ಅದಕ್ಕಿಂತ ಹೆಚ್ಚಿದ್ದರೆ ನಾವು ಮರುಮೌಲ್ಯಮಾಪನ ಶುಲ್ಕವನ್ನು ಮರುಪಾವತಿಸುತ್ತೇವೆ. ಎಂದು ಹೇಳಿದರು.