ನೆಲ್ಲೂರು(ಆಂದ್ರ ಪ್ರದೇಶ), ಜೂ 16 (DaijiworldNews/DB): ಧಾರ್ಮಿಕ ಆಚರಣೆಯ ಹೆಸರಿನಲ್ಲಿ ನಾಲ್ಕು ವರ್ಷದ ಪುತ್ರಿಯ ಬಾಯಿಯೊಳಗೆ ತಂದೆ ಕುಂಕುಮ ತುಂಬಿಸಿದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಪುನರ್ವಿಕಾ ಸಾವನ್ನಪ್ಪಿದ ಬಾಲಕಿ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಕಾರಣಕ್ಕಾಗಿ ಯಾರದ್ದೋ ಸಲಹೆ ಮೇರೆಗೆ ತಂದೆ ವೇಣುಗೋಪಾಲ್ ತನ್ನ ನಾಲ್ಕು ವರ್ಷದ ಪುತ್ರಿಯ ಬಾಯಿಯೊಳಗೆ ಕುಂಕುಮ ತುಂಬಿಸಿದ್ದಾನೆ. ಇದರಿಂದ ಮಗುವಿಗೆ ಉಸಿರುಗಟ್ಟಿ ಪ್ರಜ್ಞಾಹೀನವಾಗಿ ಮೂರ್ಛೆ ತಪ್ಪಿದೆ. ಕೂಡಲೇ ಆಕೆಯ ತಾಯಿ ಕಿರುಚಿಕೊಂಡಿದ್ದು, ನೆರೆಹೊರೆಯವರು ಓಡಿ ಬಂದು ಮಗುವನ್ನು ಸನಿಹದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಪುನರ್ವಿಕಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ.
ಸದ್ಯ ಆಕೆಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ದುಷ್ಟಶಕ್ತಿಗಳನ್ನು ಓಡಿಸಲು ಈ ಆಚರಣೆ ಮಾಡಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.