ಬೆಂಗಳೂರು, ಜೂ 16 (DaijiworldNews/DB): ಬ್ಯಾಗ್ನಲ್ಲಿ ಸಜೀವ ಗುಂಡನ್ನು ಇಟ್ಟುಕೊಂಡು ಬಂದಿದ್ದ ಅಮೆರಿಕಾ ಮೂಲದ ಪ್ರಜೆಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅಮೆರಿಕದ ಟೆಕ್ಸಾಸ್ ಮೂಲದ ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬುವವರು ಕೌಬಾಯ್ ಅಸಾಲ್ಟ್ ರೈಫಲ್ ನ ಗುಂಡನ್ನು ತಮ್ಮ ಬ್ಯಾಗ್ನಲ್ಲಿಟ್ಟು ಸಂಜೆ 5.55ಕ್ಕೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಡುವ ಏರ್ ಏಷ್ಯಾ ಇಂಡಿಯಾ ವಿಮಾನವೇರಲು ಬಂದಿದ್ದರು. ಈ ವೇಳೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅವರಲ್ಲಿ 30 ಎಂಎಂ ಕ್ಯಾಲಿಬರ್ ಸಜೀವಗುಂಡು ಇರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.
ವಿಚಾರಣೆ ವೇಳೆ ಅವರು ಕೋಲ್ಕತ್ತಾದಲ್ಲಿ ನಡೆಯಲಿದ್ದ ಅಧಿಕೃತ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದು, ಬಂದೂಕು ಪರವಾನಿಗೆಯನ್ನೂ ಹೊಂದಿದ್ದರು. ಆದರೆ ಭಾರತದಲ್ಲಿನ ವಿಮಾನ ನಿಲ್ದಾಣಗಳ ಕಾನೂನಿನಡಿ ಇಂತಹವುಗಳನ್ನು ಸಾಗಿಸಲು ಅಗತ್ಯ ದಾಖಲೆಗಳು ಬೇಕಾಗಿದ್ದು, ಅವರ ಬಳಿ ಅಂತಹ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.