ನವದೆಹಲಿ, ಜೂ16 (DaijiworldNews/DB): ಅಗ್ನಿಪಥ ಯೋಜನೆಯಡಿ ಸೇನೆಯ ವ್ಯವಸ್ಥೆ ಬದಲಾವಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
'ಅಗ್ನಿಪಥ' ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆ, ಹಿಂಸಾಚಾರಗಳು ನಡೆದಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ, ಸೇನಾಪಡೆಗಳ ಶೇ 3ರಷ್ಟು ಸಿಬಂದಿಯನ್ನು ಮೊದಲ ವರ್ಷದಲ್ಲಿ ಈ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಸೇನಾ ವ್ಯವಸ್ಥೆಯಲ್ಲಿ ನೂತನ ಯೋಜನೆಯಡಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಲವರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಕಾಂಕ್ಷೆ ಇರುತ್ತದೆ. ಅಂತಹ ಯುವಕರಿಗೆ ಅವಕಾಶ ಸೃಷ್ಟಿಸಿಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ನೇಮಕವಾಗುವ ಸಿಬಂದಿ ಪ್ರಮಾಣವೂ ಪ್ರಸ್ತುತ ಇರುವುದಕ್ಕಿಂತ ಮೂರು ಪಟ್ಟು ಏರಲಿದೆ. ಅಲ್ಪಾವಧಿಗಷ್ಟೇ ಅವರ ನೇಮಕಾತಿ ನಡೆಯುವುದರಿಂದ ಸೇನಾವ್ಯವಸ್ಥೆಯ ಕಾರ್ಯನಿರ್ವಹಣೆಗೆ ತೊಂದೆರೆಯಾಗಲಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ವಿವಿಧ ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ಭಾರತದಲ್ಲಿ ಜಾರಿಯ ಹಂತದಲ್ಲಿದೆ. ಸೇನಾ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.