ಚಂಡೀಗಢ ಜೂ 16 (DaijiworldNews/MS): ಏಳು ವರ್ಷಗಳ ಹಿಂದೆ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಕ್ರೀಡಾಪಟು, ವಕೀಲ ಸಿಪ್ಪಿ ಸಿಧು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಬೀನಾ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಸಿಬಿಐ ಬಂಧಿಸಿದೆ.
ಆರೋಪಿ ಕಲ್ಯಾಣಿ ಸಿಂಗ್ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 167ರ ಅಡಿ ಸಲ್ಲಿಸಲಾದ ಅರ್ಜಿಯಲ್ಲಿ, ಸಿಧು ಮತ್ತು ಆಕೆಯ ನಡುವೆ ಸಂಬಂಧ ಇತ್ತು ಎಂದು ಸಿಬಿಐ ಹೇಳಿದೆ.
ಸಿಧುವನ್ನು ಮದುವೆಯಾಗಲು ಕಲ್ಯಾಣಿ ಬಯಸಿದ್ದರು. ಆದರೆ ಸಿಧು ಪೋಷಕರು ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದರು. ಈ ಮಧ್ಯೆ ಕೆಲ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಸಿಧು, ಆಕೆಯ ಪೋಷಕರು ಮತ್ತು ಸ್ನೇಹಿತರಿಗೆ ಸೋರಿಕೆ ಮಾಡಿದ್ದು ಕಲ್ಯಾಣಿ ಮತ್ತವರ ಕುಟುಂಬಕ್ಕೆ ಮುಜುಗರ ಉಂಟುಮಾಡಿತ್ತು.
ನಂತರ ಚಂಡೀಗಢದ ಸೆಕ್ಟರ್ 27ರ ಪಾರ್ಕ್ನಲ್ಲಿ ತನ್ನನ್ನು ಭೇಟಿಯಾಗುವಂತೆ ಸಿಧುಗೆ ಆಕೆ ಕೇಳಿಕೊಂಡಳು, ಅಲ್ಲಿ ಮತ್ತೊಬ್ಬ ದುಷ್ಕರ್ಮಿಯೊಂದಿಗೆ ಸೇರಿ ಸೆಪ್ಟೆಂಬರ್ 20, 2015ರಂದು ಆತನನ್ನು ಗುಂಡಿಕ್ಕಿ ಕೊಂದಳು ಎಂದು ಸಿಬಿಐ ಆರೋಪಿಸಿದೆ.
ಸೆಪ್ಟೆಂಬರ್ 2015ರಲ್ಲಿ ಚಂಡೀಗಢದಲ್ಲಿ ರಾಷ್ಟ್ರಮಟ್ಟದ ಶೂಟಿಂಗ್ ಕ್ರೀಡಾಪಟು ಹಾಗೂ ವಕೀಲ ಸುಖಮನ್ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು