ನವದೆಹಲಿ, ಜೂ 16 (DaijiworldNews/HR): ಉತ್ತರ ಪ್ರದೇಶದಲ್ಲಿ ನಡೆದ ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ಗಳಿಂದ ಕೆಡವುತ್ತಿರುವ ನಡೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿ ಮೂರು ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಅದು ಸೂಚಿಸಿದೆ ಎನ್ನಲಾಗಿದೆ.
ಉತ್ತರ ಪ್ರದೇಶ ಸರ್ಕಾರ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿದ್ದು, ಅದರ ಸದಸ್ಯರ ಆಸ್ತಿಗಳನ್ನು ನೆಲಸಮ ಮಾಡುತ್ತಿದೆ. ಈ ತೆರವು ಕಾರ್ಯಾಚರಣೆಗೂ ಮುನ್ನ ತಮಗೆ ಯಾವುದೇ ನೋಟಿಸ್ ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಈ ನಿರ್ದೇಶನ ಕೊಟ್ಟಿದೆ.
ಇನ್ನು ಅಗತ್ಯವಿರುವ ಪ್ರಕ್ರಿಯೆಗಳನ್ನು ಪಾಲಿಸದೆಯೇ ನಡೆಯುತ್ತಿರುವ ಆಸ್ತಿಗಳ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಜಮೈತ್-ಉಲಾಮ-ಇ-ಹಿಂದ್ ಅರ್ಜಿ ಸಲ್ಲಿಸಿದೆ.
ತೆರವು ಕಾರ್ಯಾಚರಣೆಗಳು ಕಾನೂನಿಗೆ ಅನುಗುಣವಾಗಿ ನಡೆಯಬೇಕು. ಅವುಗಳು ಪ್ರತೀಕಾರದ ಕ್ರಮವಾಗಬಾರದು ಎಂದು ಸುಪ್ರೀಂ ಹೇಳಿದೆ.