ಮುಂಬೈ, ಜೂ16(DaijiworldNews/DB): ಮಹಿಳೆ ಮಾಡಿದ ಎಡವಟ್ಟಿನಿಂದಾಗಿ 5 ಲಕ್ಷ ರೂ. ಮೌಲ್ಯದ 10 ತೊಲ ಬಂಗಾರವನ್ನು ಇಲಿಗಳು ಹೊತ್ತೊಯ್ದ ಘಟನೆ ಮುಂಬೈನ ಗೋಕುಲದಾಸ ಕಾಲನಿಯಲ್ಲಿ ನಡೆದಿದೆ. ಇಲಿಗಳ ಬಾಯಿಂದ ಎಲ್ಲಾ ಬಂಗಾರವನ್ನು ಮರಳಿ ಪಡೆಯಲಾಗಿದೆ.
ಮಹಿಳೆಯೊಬ್ಬರು ತಮ್ಮ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಕೊಂಡೊಯ್ದಿದ್ದರು. ಈ ವೇಳೆ ಬೀದಿಯಲ್ಲಿದ್ದ ಮಕ್ಕಳಿಗೆ ವಡಾ ಪಾವ್ ಕೊಡಲು ಮುಂದಾದ ಮಹಿಳೆ ವಡಾಪಾವ್ ಬದಲು ಚಿನ್ನಾಭರಣವಿದ್ದ ಬ್ಯಾಗ್ ನ್ನು ನೀಡಿದ್ದಾರೆ. ಮಕ್ಕಳು ಆ ಬ್ಯಾಗ್ ನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ.
ಬ್ಯಾಗ್ ಕಳೆದು ಹೋಗಿರುವುದು ಅರಿವಿಗೆ ಬಂದ ತತ್ ಕ್ಷಣ ಕಕ್ಕಾಬಿಕ್ಕಿಯಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಅನಾಹುತ ಬೆಳಕಿಗೆ ಬಂದಿದೆ.
ಕಸದ ರಾಶಿಯಿಂದ ಬಂಗಾರವಿದ್ದ ಚೀಲವನ್ನು ಇಲಿಗಳು ಕೊಂಡೊಯ್ದು ಸೂರಿನ ಕೆಳಗೆ ಇಟ್ಟಿದ್ದವು ಎಂದು ಸಬ್ ಇನ್ಸ್ ಪೆಕ್ಟರ್ ಜಿ. ಘಾರ್ಗೆ ಗುರುವಾರ ತಿಳಿಸಿದರು. ಕೊನೆಗೂ ಮಹಿಳೆಯ ಚಿನ್ನಾಭರಣ ಸುರಕ್ಷಿತವಾಗಿ ಸಿಕ್ಕಿದೆ.