ಮಂಡ್ಯ, ಜೂ 16 (DaijiworldNews/MS) : ಊಟಕ್ಕೆಂದು ಮಧ್ಯಾಹ್ನ ಕೆಲಸದಿಂದ ಮನೆಗೆ ಬಂದ ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮ ನಡೆದಿದೆ. ಮೃತರನ್ನು ಪುಷ್ಪಲತಾ (45) ಎಂದು ಗುರುತಿಸಲಾಗಿದೆ.
ಪುಷ್ಪಲತಾ ಅವರ ಪತಿ ಕಳೆದ 10 ವರ್ಷದ ಹಿಂದೆ ಮೃತಪಟ್ಟಿದ್ದರು. ಮಗನನ್ನು ನೋಡಿಕೊಂಡು ಜೀವನ ನಿರ್ವಹಣೆಗೆಂದು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಮೆಡಿಕಲ್ ಸ್ಟೋರ್ ಕೆಲಸ ಮಾಡಿ ಬುಧವಾರ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದಾಗ ಪುಷ್ಪಲತಾ ಕೊಲೆ ನಡೆದಿದೆ. ತಾಯಿ ಎಷ್ಟು ಸಮಯವಾದರೂ ಮೆಡಿಕಲ್ ಸ್ಟೋರ್ಗೆ ಬಾರದ ಹಿನ್ನೆಲೆ ಪುಷ್ಪಲತಾ ಪುತ್ರ ಮನೆಗೆ ತೆರಳಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಪುಷ್ಪಲತಾ ತಲೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು ಮೃತದೇಹ ಅರ್ಧಂಬರ್ಧ ಬಟ್ಟೆಯಲ್ಲಿ ಪತ್ತೆಯಾಗಿರುವುದರಿಂದ ಆಕೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪುಷ್ಪಲತಾ ಅವರ ಕೊಲೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧಕಾರ್ಯವನ್ನು ಪ್ರಾರಂಭಿಸಿದ್ದಾರೆ.