ದಾವಣಗೆರೆ, ಜೂ 16 (DaijiworldNews/HR): ಭ್ರಷ್ಟಾಚಾರದ ಪ್ರಕರಣದ ತನಿಖೆಯ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ನ ದುರಂತ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಆಗಮಿಸುವಂತೆ ನೊಟೀಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ನವರು ರಾಜಭವನ ಚಲೋ ಮಾಡುತ್ತಿರುವುದು ದುರಂತ. ಈ ರೀತಿ ಅವರು ಮಾಡಿದರೆ ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ಮಾಡುತ್ತಿರುವುದು ಕಾನೂನು ಬಾಹಿರ. ಭ್ರಷ್ಟಾಚಾರದ ಪ್ರಕರಣದ ತನಿಖೆಯ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ನ ದುರಂತ ಎಂದಿದ್ದಾರೆ.
ಕುಪ್ಪಳ್ಳಿಯಿಂದ ಬೆಂಗಳೂರಿಗೆ ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಈಗಾಗಲೇ ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಲಾಗಿದ್ದು, ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬುದರ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಜನತೆ ನೀಡಿದ ಸಲಹೆಯಂತೆ ಪಠ್ಯಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.