ನವದೆಹಲಿ, ಜೂ16(DaijiworldNews/DB): ಅಗ್ನಿಪಥ ಯೋಜನೆಯು ಯುವಕರಲ್ಲಿ ಅಸಮಾಧಾನ ಸೃಷ್ಟಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಸೈನಿಕರ ನೇಮಕಾತಿ ವಿಚಾರದಲ್ಲಿ ಬದಲಾವಣೆ ತಂದಿರುವ ಬಗ್ಗೆ ಹಲವು ಯುವಕರು ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಹಾಕಿದ್ದಾರೆ. ಹೊಸ ಯೋಜನರ ಪ್ರಕಾರ ಶೇ. 75 ಮಂದಿ ಯುವಕರು ನಾಲ್ಕು ವರ್ಷದ ಬಳಿಕ ಸೇವಾ ನಿವೃತ್ತಿ ಪಡೆಯಲಿದ್ದು, ಅವರಿಗೆ ಪಿಂಚಣಿ ವ್ಯವಸ್ಥೆ ಯೂ ಇಲ್ಲ. ಅಲ್ಲದೆ ಮುಂದಿನ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ನಿರುದ್ಯೋಗಿಗಳಾಗಲಿದ್ದಾರೆ. ಇದು ನಿರಂತರವಾಗಿದ್ದು ಅಸಮಾಧಾನ ಹೆಚ್ಚಾಗಬಹುದು. ಅವರ ಭವಿಷ್ಯವೇನು? ಎಂದು ಪ್ರಶ್ನಿಸಿದ್ದಾರೆ.
ನಾಲ್ಕು ವರ್ಷದ ಸೇವೆ ನಂತರ ಬೇರೆ ಉದ್ಯೋಗಕ್ಕೂ ಅವರಿಗೆ ಅಡ್ಡಿ ಎದುರಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ನಾಲ್ಕು ವರ್ಷಗಳ ನಂತರ ಶೇ.25 ಮಂದಿ ಸೇವೆಯಲ್ಲಿ ಮುಂದುವರಿದರೆ ಶೇ. 75 ಮಂದಿ ಸೇವೆ ನಿಲ್ಲಿಸುವುದರಿಂದ ತರಬೇತಿಗಾಗಿ ಮಾಡಿದ ವೆಚ್ಚವೂ ವ್ಯರ್ಥವಾಗುತ್ತದೆ. ಸರ್ಕಾರಕ್ಕೆ ಇದು ಹೊರೆಯಾಗಲಿದೆ ಎಂದು ಪತ್ರದಲ್ಲಿ ವರುಣ್ ಗಾಂಧಿ ತಿಳಿಸಿದ್ದಾರೆ.