ನವದೆಹಲಿ, ಜೂ 16 (DaijiworldNews/MS) : ಇನ್ಮುಂದೆ ಹೊಸದಾಗಿ ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯಬೇಕೆಂದಿದ್ದರೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಹೌದು ಇನ್ನು ಎಲ್ಪಿಜಿ ಸಂಪರ್ಕ ದುಬಾರಿಯಾಗಲಿದ್ದು ಇದು ಇಂದಿನಿಂದಲೇ ( ಜೂ 16) ಜಾರಿಗೆ ಬರಲಿದೆ.
ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್ಗಳ ಭದ್ರತಾ ಠೇವಣಿಯನ್ನು ಹೆಚ್ಚಿಸಿರುವುದರಿಂದ ಈ ಮೊತ್ತ ಪಾವತಿ ಅನಿವಾರ್ಯವಾಗಿದೆ. ಈ ಮೊದಲು ಹೊಸ ಗ್ಯಾಸ್ ಸಂಪರ್ಕಕ್ಕಾಗಿ 1450 ರೂ. ಪಾವತಿಸಬೇಕಾಗಿತ್ತು. ಆದರೆ ಈಗ ಇದಕ್ಕಾಗಿ 750 ರೂ. ಹೆಚ್ಚು ಅಂದರೆ 2200 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಸಿಂಗಲ್, ಡಬಲ್ ಸಿಲಿಂಡರ್ ಎರಡು ದುಬಾರಿ:
ಎರಡು ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಂಡರೆ, 1500 ರೂ. ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಂದರೆ, ಇದಕ್ಕಾಗಿ 4400 ರೂ.ಗಳನ್ನು ಭದ್ರತೆಯಾಗಿ ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು 2900 ರೂಪಾಯಿ ಪಾವತಿಸಬೇಕಿತ್ತು.
ಅದೇ ರೀತಿ ಗ್ರಾಹಕರು ಹೊಸ ರೆಗ್ಯುಲೇಟರ್ಗೆ 150 ರೂಪಾಯಿಗಳ ಬದಲಿಗೆ 250 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನೀಡಿದ ಮಾಹಿತಿಯಲ್ಲಿ, 5 ಕೆಜಿ ಸಿಲಿಂಡರ್ನ ಭದ್ರತೆಯನ್ನು ಈಗ 800 ರ ಬದಲು 1150 ಕ್ಕೆ ಬದಲಾಯಿಸಲಾಗಿದೆ ಎಂದು ತಿಳಿಸಲಾಗಿದೆ. ಇದಲ್ಲದೆ ಪಾಸ್ಬುಕ್ಗೆ- ರೂ. 25 ಹಾಗೂ ಅನಿಲ ಸಂಪರ್ಕದ ಪೈಪ್ಗೆ - 150 ರೂ. ಪಾವತಿಸಬೇಕಾಗುತ್ತದೆ.