ಬೆಂಗಳೂರು, ಜೂ 16 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇಡಿನ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಭವನ ಚಲೋ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಹೆದರಿಸುವ ವಿಫಲ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ ಅಂತಹ ಯಾವುದೇ ಹೆದರಿಕೆಗಳಿಗೆ ಬಗ್ಗುವವರು ನಾವಲ್ಲ. ಹೋರಾಟ ಮಾಡುವ ಹಕ್ಕನ್ನು ನಾವು ಪಾಲಿಸುತ್ತಿದ್ದೇವೆ. ಪೊಲೀಸರನ್ನು ಬಳಸಿಕೊಂಡು ಅದನ್ನು ಹತ್ತಿಕ್ಕುವ ಕೇಂದ್ರದ ಪ್ರಯತ್ನ ಫಲಪ್ರದವಾಗುವುದಿಲ್ಲ. ಜೈಲಿಗೆ ಹೋಗುವುದಕ್ಕೂ ನಾವು ಸಿದ್ದ ಎಂದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿ ಕುಟುಂಬಕ್ಕೆ ಕಿರುಕುಳ ನೀಡುವ ಮೂಲಕ ಸರ್ಕಾರ ನೀಚ ಕೆಲಸ ಮಾಡುತ್ತಿದೆ. ರಾಜಭವನಕ್ಕೆ ಮುತ್ತಿಗೆ ಹಾಕುವ ಮೂಲಕ ನೀಚ ಸರ್ಕಾರಕ್ಕೆ ಬುದ್ದಿ ಕಲಿಸಲಾಗುವುದು. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಸರ್ಕಾರದ ವಿರುದ್ದ ನಮ್ಮ ಹೋರಾಟ ನಿರಂತರವಾಗಲಿದೆ ಎಂದವರು ತಿಳಿಸಿದರು.
ಸೋನಿಯಾ ಗಾಂಧಿಯವರ ಕುಟುಂಬ 20000 ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ್ದಾರೆ. ಟ್ರಸ್ಟಿನ ಆಸ್ತಿಯನ್ನು ಕೂಡಾ ತಮ್ಮದಾಗಿಸಿಕೊಂಡಿಲ್ಲ. ಆದರೆ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭ್ರಮೆಯಲ್ಲಿ ಕೇಂದ್ರ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದವರು ಇದೇ ವೇಳೆ ಟೀಕಿಸಿದರು.