ಹೈದರಾಬಾದ್, ಜೂ 16 (DaijiworldNews/DB): ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ಸ್ಪೋಟಕ ಸಂಗತಿಯೊಂದನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ. ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಥವಾ ಒಟಿಟಿಯಲ್ಲಿ ವಯಸ್ಕರ ವೀಡಿಯೋ ಮತ್ತು ನೆಗೆಟಿವ್ ಕಂಟೆಂಟ್ ಸಿನೆಮಾಗಳಿಂದ ಪ್ರೇರಿತರಾಗಿ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಕಾರಿನಲ್ಲಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರು ಸೇರಿ ಆರು ಮಂದಿ ಅಪರಾಧಿಗಳನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ವೇಳೆ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಥವಾ ಒಟಿಟಿಯಲ್ಲಿ ಸುಲಭವಾಗಿ ಲಭ್ಯವಿರುವ ನೆಗೆಟಿವ್ ಸಿನೆಮಾಗಳೇ ಕೃತ್ಯ ಎಸಗಲು ಪ್ರೇರಣೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇಂತಹ ಸಿನೆಮಾಗಳನ್ನು ನೋಡಿ ಪ್ರೇರಿತರಾಗಿ, ಇಬ್ಬರು ಹುಡುಗಿಯರನ್ನು ಬಲೆಗೆ ಬೀಳಿಸುವ ಪ್ಲಾನ್ ಮಾಡಿದ್ದರು. ಆದರೆ ಒಬ್ಬಾಕೆ ಅವರಿಗೆ ಸಿಕ್ಕಿರಲಿಲ್ಲ. ಇನ್ನೊಬ್ಬಾಕೆಯನ್ನು ಮೇ.28ರಂದು ಪಬ್ನಲ್ಲಿ ನಡೆದ ಪಾರ್ಟಿ ಮುಗಿಸಿ ತೆರಳುವಾಗ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಸರ್ಕಾರಿ ವಾಹನದಲ್ಲಿ ಅತ್ಯಾಚಾರ ಎಸಗಿದ್ದರು. ಸದ್ಯ ಎಲ್ಲಾ ಆರೋಪಿಗಳು ಪೊಲೀಸ್ ಕಷ್ಟಡಿಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
ಆರೋಪಿಗಳ ಪೈಕಿ ಓಮರ್ ಖಾನ್ ರಾಜಕೀಯ ನಂಟು ಹೊಂದಿರುವ ಶ್ರೀಮಂತ ಕುಟುಂಬಕ್ಕೆ ಸೇರಿದವನು ಎಂದು ತಿಳಿದು ಬಂದಿದೆ. ಸಾದುದ್ದಿನ್ ಮಲಿಕ್ ಸ್ಥಳೀಯ ಟಿಆರ್ಎಸ್ ನಾಯಕನ ಪುತ್ರ. ಅಪ್ರಾಪ್ತ ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ. ಆದರೆ (ಹೆಸರು ಬಹಿರಂಗಪಡಿಸಿಲ್ಲ. ಆದರೆ ಅಪ್ರಾಪ್ತರ ಪೈಕಿ ಓರ್ವ ಆರೋಪಿ ಟಿಆರ್ಎಸ್ ನಾಯಕನ ಪುತ್ರ, ಇನ್ನೋರ್ವ ಜಿಎಂಸಿ ಕಾರ್ಪೊರೇಟರ್ ಪುತ್ರ, ಮತ್ತಓರ್ವ ಸಂಗಾರೆಡ್ಡಿಯ ಟಿಆರ್ಎಸ್ ಕಾರ್ಪೊರೇಟರ್ ಪುತ್ರ ಹಾಗೂ ನಾಲ್ಕನೇ ಅಪ್ರಾಪ್ತ ಆರೋಪಿ ಎಐಎಂಐಎಂ ಶಾಸಕರ ಪುತ್ರ ಎಂದು ತಿಳಿದು ಬಂದಿದೆ.
ಕೃತ್ಯವು ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ನಡೆದಿದೆ ಎಂಬುದಾಗಿ ಆರೋಪಿ ಸಾದುದ್ದೀನ್ ಬಾಯ್ಬಿಟ್ಟಿದ್ದನು. ಆ ಕಾರನ್ನು ರಾಜಕೀಯ ಕುಟುಂಬದ ಜೊತೆ ಸಂಪರ್ಕವಿರುವ ಮಹಿಳೆಯ ಒಡೆತನದಲ್ಲಿರುವ ಫಾರ್ಮ್ ಹೌಸ್ನಿಂದ ಈ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆ ಕಾರು ಸರ್ಕಾರಿ ವಾಹನವಾಗಿದ್ದು, ವಕ್ಫ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಬಳಕೆ ಮಾಡುತ್ತಿದ್ದರು. ಅಪ್ರಾಪ್ತರು ಓಡಿಸಿದ್ದ ಮರ್ಸಿಡಿಸ್ ಮತ್ತು ಇನ್ನೋವಾ ಕಾರುಗಳ ಪೈಕಿ ಮರ್ಸಿಡೆಸ್ ಕಾರು ತೆಲಂಗಾಣದ ಶಾಸಕರೊಬ್ಬರದ್ದು ಎನ್ನಲಾಗಿದೆ.
ವೆಬ್ ಸರಣಿಗಳಿಗೆ ಯಾವುದೇ ಸೆನ್ಸಾರ್ ಇಲ್ಲವಾದ್ದರಿಂದ ಹಿಂಸೆ, ಸೆಕ್ಸ್, ಅಪರಾಧ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಅಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಒಟಿಟಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅಲ್ಲಿ ಸುಲಭವಾಗಿ ಸಿಗುವ ಇಂತಹ ನೆಗೆಟಿವ್ ಸಿನೆಮಾಗಳನ್ನು ನೋಡಿ ಅಂತಹವುಗಳಿಂದ ಪ್ರೇರಿತರಾಗಿ ಅನೈತಿಕ ದಾರಿ ಹಿಡಿಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.