ತುಮಕೂರು, ಜೂ 15 (DaijiworldNews/DB): ದುಷ್ಕರ್ಮಿಗಳ ತಂಡವೊಂದು ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿಮೂರ್ತಿ (45) ಅವರನ್ನು ಹಾಡಹಗಲೇ ಕೊಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಹೆದ್ದಾರಿ ಪಕ್ಕದಲ್ಲಿ ಕೃತ್ಯ ನಡೆದಿದೆ. ಸ್ನೇಹಿತರ ಜೊತೆ ಸೇರಿ ಅವರು ಚಹಾ ಕುಡಿಯುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಇದರಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದ ಅವರು ಬಳಿಕ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತತ್ಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದ ಇಬ್ಬರು ಯುವಕರು ಇತ್ತೀಚೆಗಷ್ಟೇ ಕೊಲೆಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಡಿಎಸ್ಎಸ್ ಮುಖಂಡನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಶೀಘ್ರ ಆರೋಪಿಗಳ ಬಂಧನ
ಇನ್ನು ಡಿಎಸ್ಎಸ್ ಮುಖಂಡ ನರಸಿಂಹ ಮೂರ್ತಿಯವರ ಮೃತ ಶರೀರವನ್ನು ಇರಿಸಲಾದ ಶವಾಗಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.