ಬೆಂಗಳೂರು, ಜೂ 15 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಕೆ. ಅವರನ್ನು ಬಂಧಿಸಿದ್ದಾರೆ.
2019ನೇ ಬ್ಯಾಚ್ನ ಪಿಎಸ್ಐ ಆಗಿರುವ ಹರೀಶ್, ಪಿಎಸ್ಐ ಅಭ್ಯರ್ಥಿಗಳು ಮತ್ತು ನೇಮಕಾರಿ ವಿಭಾಗದ ನಡುವೆ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ ಪಿಎಸ್ಐ ಆಗುವುದಕ್ಕೂ ಮೊದಲು ಎಫ್ಡಿಎ ಆಗಿದ್ದ ಹರೀಶ್ ನೇಮಕಾತಿ ವಿಭಾಗದ ಎಫ್ಡಿಎ ಜೊತೆ ಸಂಪರ್ಕ ಹೊಂದಿದ್ದರು. ಕಳೆದ ಸೋಮವಾರ ಅವರು ಬಂಧಿಸಲ್ಪಟ್ಟಿದ್ದು, ಇದೀಗ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಹರೀಶ್ ಕೂಡಾ ಹಣ ನೀಡಿಯೇ ಪಿಎಸ್ಐ ಆಗಿ ಆಯ್ಕೆಯಾಗಿರಬಹುದೇ ಎಂಬ ಸಂಶಯ ಇದೀಗ ಸಿಐಡಿ ಅಧಿಕಾರಿಗಳನ್ನು ಕಾಡುತ್ತಿದೆ. ಏಕೆಂದರೆ ನೇರವಾಗಿ ಆಯ್ಕೆಯಾಗಿ ಬಂದರೆ ಆತನಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುವಷ್ಟು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ ಎಂಬುದು ಈ ಅನುಮಾನಕ್ಕೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಈಗಾಗಲೇ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಸೇರಿದಂತೆ ಹಲವರ ಬಂಧನ ಆಗಿದೆ. ಬೆಂಗಳೂರಿನಲ್ಲೇ ಹತ್ತಕ್ಕೂ ಹೆಚ್ಚು ಮಂದಿ ಬಂಧಿಸಲ್ಪಟ್ಟಿದ್ದಾರೆ. ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.