ಮಧ್ಯಪ್ರದೇಶ, ಜೂ 15 (DaijiworldNews/DB): ಉದ್ಯೋಗಸ್ಥ ಹೆತ್ತವರು ತಮ್ಮ ಮಗುವನ್ನು ನೋಡಿಕೊಳ್ಳಲೆಂದು ನೇಮಿಸಿದ್ದ ದಾದಿಯೋರ್ವಳು ಮಗುವಿಗೆ ಚಿತ್ರಹಿಂಸೆ ನೀಡಿದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಉದ್ಯೋಗ ನಿಮಿತ್ತ ಹೊರ ಹೋಗಬೇಕಾದ ಅನಿವಾರ್ಯತೆಯಿಂದಾಗಿ ಪೋಷಕರು ತಮ್ಮ ಎರಡು ವರ್ಷದ ಮಗುವನ್ನು ನೋಡಿಕೊಳ್ಳಲು ಜಬಲ್ಪುರದ ಮನೆಗೆ ರಜಿನಿ ಚೌಧರಿ ಎಂಬ ದಾದಿಯನ್ನು ತಿಂಗಳಿಗೆ 5,000 ರೂ. ಸಂಬಳದೊಂದಿಗೆ ನೇಮಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಬಾಲಕನಲ್ಲಿ ಪೋಷಕರು ಬದಲಾವಣೆಯನ್ನು ಗಮನಿಸತೊಡಗಿದ್ದರು. ಆತ ನಿಶ್ಯಬ್ದ ಮತ್ತು ದುರ್ಬಲನಾಗುತ್ತಿದ್ದುದನ್ನು ಕಂಡು ವೈದ್ಯರ ಬಳಿ ಆತನನ್ನು ಕರೆದೊಯ್ದಿದ್ದರು. ಈ ವೇಳೆ ಮಗುವಿನ ಆಂತರಿಕ ಅಂಗಾಂಗಗಳು ಊದಿಕೊಂಡಿರುವುದು ಗೊತ್ತಾಗಿದೆ. ಚಿತ್ರಹಿಂಸೆ ನೀಡಿರುವುದರಿಂದಲೇ ಹೀಗಾಗಿದೆ ಎಂದು ವೈದ್ಯರು ಶಂಕಿಸಿದ್ದ ಕಾರಣ, ಮನೆಯಲ್ಲಿ ಸಿಸಿಕ್ಯಾಮರಾ ಅಳವಡಿಸಿದ್ದರು. ಈ ವೇಳೆ ನಿಜ ವಿಚಾರ ಗೊತ್ತಾಗಿ ಪೋಷಕರು ಆತಂಕಗೊಂಡಿದ್ದಾರೆ.
ಮಗುವನ್ನು ನೋಡಿಕೊಳ್ಳಲು ನೇಮಿಸಿದ್ದ ದಾದಿ ರಜಿನಿ ಮಗುವನ್ನು ಥಳಿಸುವುದು, ಕೂದಲು ಹಿಡಿದು ಎಳೆದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ತತ್ಕ್ಷಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಜನೆ ವಿರುದ್ದ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಿದ್ದಾರೆ.