ಬೆಂಗಳೂರು, ಜೂ 14 (DaijiworldNews/DB): ಮೇವು ತಿಂದವರು ಜೈಲಿನಲ್ಲಿದ್ದಂತೆಯೇ ಪೇಪರ್ ತಿಂದವರು ಕೂಡಾ ಜೈಲು ಪಾಲಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ವಿರುದ್ದ ಹೋರಾಡುವ ಕಾಂಗ್ರೆಸ್ನವರ ಸಂವಿಧಾನಕ್ಕಿಂತ ಮೇಲಲ್ಲ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಭ್ರಷ್ಟಾಚಾರ ಎಸಗಿದವರಿಗೆ, ಎಸಗುವವರಿಗೆ ಆ ಪಕ್ಷ ಬೆಂಬಲ ನೀಡುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ನಡೆಸದೇ ಇರುವ ಭ್ರಷ್ಟಾಚಾರವೇ ಇಲ್ಲ ಎಂದರು.
ಇಂಡಿಯನ್ ಆಯಿಲ್ ಹಗರಣ,, 2ಜಿ ಹಗರಣ, ಆಗಸ್ಟಾ ವೆಸ್ಟ್ ಲ್ಯಾಂಡ್, ಕೆಜಿ ಬೇಸಿನ್ ಹಗರಣ ಸೇರಿದಂತೆ ಕಾಂಗ್ರೆಸ್ನ ಭ್ರಷ್ಟಾಚಾರದ ಪಟ್ಟಿ ದೊಡ್ಡದು. ಆ ಪಕ್ಷ ಭ್ರಷ್ಟಾಚಾರದ ಸರದಾರ ಆಗಿ ರೂಪು ತಳೆದಿದೆ ಎಂದು ಸಿ. ಟಿ. ರವಿ ಆಪಾದಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಸೇರಿ 1937 ರಲ್ಲಿ ಕಟ್ಟಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ನೆಹರೂ ಶೇರು ಆ ಸಂಸ್ಥೆಯಲ್ಲಿ 300 ರೂಪಾಯಿ. ಆದರೆ ಮೂಲ ಷೇರುದಾರರಿಗೆ ಗೊತ್ತಿಲ್ಲದೇ ಇವರು ಹಣ ವರ್ಗಾವಣೆ ಮಾಡಿಕೊಂಡಿರುವುದನ್ನು ಪ್ರಶ್ನಿಸುವುದೇ ತಪ್ಪಾ? ದೇಶಕ್ಕಿಂತ ಯಾರೂ ದೊಡ್ಡವರಲ್ಲ ಎಂದವರು ಇದೇ ವೇಳೆ ತಿಳಿಸಿದರು.
ರೈತರು ಕಷ್ಟದಲ್ಲಿದ್ದಾಗ ಕೃಷಿಯಲ್ಲಿ ಸಾವಿರಾರು ಕೋಟಿ ರೂ. ಹಣ ಮಾಡಿದವರೊಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ. ಈಗ ಭ್ರಷ್ಟಾಚಾರಿಗಳೇ ಭ್ರಷ್ಟರಿಗೆ ಬೆಂಬಲ ನೀಡುತ್ತಾರೆ. ಇವರಿಂದ ಜನರಿಗೆ ಎಂತಹ ಸಂದೇಶ ಹೋಗಬಹುದು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಮುಖಂಡನೇ ಶಿಖಂಡಿಯಾದರೆ ಹಿಂಬಾಲಕರ ಗತಿ ಏನಯ್ಯ ಎಂಬಂತಾಗಿದೆ ಆ ಪಕ್ಷದ ನಾಯಕರ ಕಥೆ ಎಂದು ವ್ಯಂಗ್ಯವಾಡಿದರು.