ಗುವಾಹಟಿ, ಜೂ 14 (DaijiworldNews/MS): ಅಸ್ಸಾಂನ ರಾಜಧಾನಿ ಗುವಾಹಟಿ ನಗರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ ನಾಲ್ವರು ಭೂ ಸಮಾಧಿಯಾಗಿದ್ದಾರೆ.
ಗುವಾಹಟಿಯ ಬೋರಗಾಂವ್ ಪ್ರದೇಶದ ಸಮೀಪದ ನಿಜಾರಪರ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭಾರೀ ಭೂಕುಸಿತದಿಂದ ಮನೆ ಕುಸಿದು ನಾಲ್ವರು ರಾತ್ರಿಯಿಡಿ ಮಣ್ಣಿನಡಿ ಸಿಲುಕಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ಎಫ್ & ಇಎಸ್) ತಂಡಗಳು ಸ್ಥಳಕ್ಕೆ ಧಾವಿಸಿ ನಾಲ್ಕು ಜನರ ದೇಹಗಳನ್ನು ಅವಶೇಷಗಳಡಿಯಿಂದ ಇಂದು ಹೊರತೆಗೆದಿದ್ದಾರೆ
ನಾಲ್ವರು ಮೃತರಲ್ಲಿ ಮೂವರು ಧುಬ್ರಿಯಿಂದ ಮತ್ತು ಒಬ್ಬರು ಕೊಕ್ರಜಾರ್ನಿಂದ ಬಂದವರಾಗಿದ್ದಾರೆ. ಇವರು ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಈ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಗುಡ್ಡದ ಮಣ್ಣು ಮನೆ ಮೇಲೆ ಬಿದ್ದ ಪರಿಣಾಮ, ಅವಷೇಶಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮಾಹಿತಿಗಳ ಪ್ರಕಾರ ಕಾಣೆಯಾದ ಕಾರ್ಮಿಕರನ್ನು ಮುನ್ವರ್ ಹುಸೇನ್, ಮೊಫಿಜುಲ್ ಹಕ್, ಅಮರುಲ್ ಹಕ್ ಮತ್ತು ಅಸನೂರ್ ಅಲಿ ಎಂದು ಗುರುತಿಸಲಾಗಿದೆ