ನವದೆಹಲಿ, ಜೂ 14 (DaijiworldNews/DB): ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ವಿಪಕ್ಷಗಳ ಒಮ್ಮತದ ನಿರ್ಧಾರದ ನಡುವೆಯೇ ಪವಾರ್ ಅವರು ಈ ಅವಕಾಶದಿಂದ ಹಿಂದಕ್ಕೆ ಸರಿದಿದ್ದಾರೆ.
ಸೋಮವಾರ ಸಂಜೆ ನಡೆದ ಎನ್ಸಿಪಿ ಸಭೆಯಲ್ಲಿ 81 ವರ್ಷದ ಶರದ್ ಪವಾರ್ ಅವರು ಈ ನಿರ್ಧಾರ ಪ್ರಕಟಿಸಿದ್ದು, ನಾನು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವುದಿಲ್ಲ. ಅಲ್ಲದೆ, ವಿಪಕ್ಷಗಳ ಅಭ್ಯರ್ಥಿಯೂ ನಾನಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಶರದ್ ಪವಾರ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಂಬಂಧ ಅವರೊಂದಿಗೆ ಮಾತುಕತೆಗಾಗಿ ಕಳೆದ ವಾರವಷ್ಟೇ ಕಾಂಗ್ರೆಸ್ ಅವರೊಂದಿಗೆ ಮಾತುಕತೆ ನಡೆದಿತ್ತು. ಆದರೆ ಇದೀಗ ಪವಾರ್ ಹೇಳಿಕೆಯ ಬಳಿಕ ಕಾಂಗ್ರೆಸ್ ಮಾತುಕತೆ ಫಲಪ್ರದವಾಗಿಲ್ಲ ಎಂಬುದು ಗೊತ್ತಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿ ಸಲಹೆ ಮೇರೆಗೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಗುರುವಾರ ಈ ಸಂಬಂಧ ಮಾತುಕತೆಗಾಗಿ ಪವಾರ್ ಮನೆಗೆ ತೆರಳಿದ್ದರು. ಅಲ್ಲದೆ, ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೂ ಮಲ್ಲಿಕಾರ್ಜುನ ಖರ್ಗೆ ಅವರು ಪವಾರ್ ಅವರನ್ನು ಕಣಕ್ಕಿಳಿಸುವ ವಿಚಾರದಲ್ಲಿ ಚರ್ಚೆ ನಡೆಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೂ ದೂರವಾಣಿ ಮುಖಾಂತರ ಖರ್ಗೆ ವಿಷಯ ಪ್ರಸ್ತಾಪ ಮಾಡಿದ್ದರು. ಆದರೆ ಪವಾರ್ ಅವರು ತಾನು ರಾಷ್ಟ್ರಪತಿ ಅಭ್ಯರ್ಥಿ ಅಲ್ಲ ಎಂಬ ಸಂದೇಶ ರವಾನಿಸುವುದರ ಮೂಲಕ ವಿಪಕ್ಷಗಳ ಎಲ್ಲಾ ಪ್ರಯತ್ನಗಳು ವಿಫಲವಾದಂತಾಗಿದೆ ಎನ್ನಲಾಗಿದೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ.