ಧರ್ಮಪುರಿ, ಜೂ 14 (DaijiworldNews/MS): ರಥೋತ್ಸವ ಮೆರವಣಿಗೆ ವೇಳೆ ರಥ ಉರುಳಿಬಿದ್ದು, ಇಬ್ಬರು ಸಾವನ್ನಪ್ಪಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ತಮಿಳುನಾಡಿನ ಧರ್ಮಪುರಿಯ ಪಪ್ಪರಪಟ್ಟಿಯಲ್ಲಿರುವ ಕಾಳಿಯಮ್ಮನ ದೇವಸ್ಥಾನದಲ್ಲಿ ನಡೆದಿದೆ.
ಪ್ರತಿ ವರ್ಷ, ತಮಿಳು ತಿಂಗಳ ವೈಕಾಶಿಯ ಅಂಗವಾಗಿ ಮಾತೆಹಳ್ಳಿ ದೇವಸ್ಥಾನವು ಕಾಳಿ ದೇವಿಗೆ ಉತ್ಸವವನ್ನು ಆಯೋಜಿಸುತ್ತದೆ. ಮಂಗಳವಾರ ಆರಂಭವಾಗಲಿರುವ ಪ್ರಮುಖ ಉತ್ಸವಕ್ಕೆ ಮುನ್ನ ರಥೋತ್ಸವವನ್ನು ಹೊರತರಲಾಯಿತು. ಈ ಮೆರವಣಿಗೆ 18 ಗ್ರಾಮಗಗಳಲ್ಲಿ ಹಾದುಹೋಗುತ್ತದೆ. ಸೋಮವಾರ ಸುಮಾರು 800 ಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ರಥವನ್ನು ಎಳೆಯುತ್ತಿದ್ದರು. 40 ಅಡಿ ಎತ್ತರದ ರಥವನ್ನು ಸಮೀಪವಿರುವ ಕಿರಿದಾದ ರಸ್ತೆಯ ಮೂಲಕ ಎಳೆಯುತ್ತಿದ್ದಾಗ ಏಕಾಏಕಿ ಅದರ ಚಕ್ರಗಳ ಎಕ್ಸೆಲ್ ಮುರಿದು, ಭಕ್ತರ ಮೇಲೆ ರಥ ಕುಸಿದು ಬಿದ್ದಿದೆ. ರಥ ಎಳೆಯುತ್ತಿದ್ದ ಭಕ್ತರು ಹಾಗೂ ಮೆರವಣಿಗೆ ವೀಕ್ಷಿಸುತ್ತಿದ್ದವರು ರಥದಡಿ ಸಿಲುಕಿದ್ದರು. ರಥದಡಿ ಸಿಲುಕಿದ ಪಾಪರಪಟ್ಟಿಯ ಎಂ.ಮನೋಹರನ್ (57) ಹಾಗೂ ಮತ್ತೇಹಳ್ಳಿಯ ಕೆ.ಸರವಣನ್ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಧರ್ಮಪುರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಥದ ಕಳಪೆ ನಿರ್ವಹಣೆಯೇ ಕುಸಿತಕ್ಕೆ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧರ್ಮಪುರಿ ಎಸ್ಪಿ ಸಿ ಕಲೈಚೆಲ್ವನ್ ಮತ್ತು ಆರ್ಡಿಒ ಚಿತ್ರಾ ವಿಜಯನ್ ತನಿಖೆ ನಡೆಸುತ್ತಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.