ಶ್ರೀನಗರ, ಜೂ 14 (DaijiworldNews/HR): ಜೂನ್ 30ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದದ್ದ ಲಷ್ಕರ್-ಎ-ತಯಬಾ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಒಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಮೂವರು ಉಗ್ರರು ಯೋಜನೆ ರೂಪಿಸಿದ್ದು, ಪಾಕಿಸ್ತಾನದ ಇಬ್ಬರು ಉಗ್ರರು ಹಾಗೂ ಒಬ್ಬ ಸ್ಥಳೀಯ ಉಗ್ರ ಸೇರಿ ರೂಪಿಸಿದ್ದ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ಈ ಕಾರ್ಯಾಚರಣೆಯ ಕುರಿತು ಟ್ವೀಟ್ ಮಾಡಿರುವ ಕಾಶ್ಮೀರ ವಲಯದ ಪೊಲೀಸರು, 'ಪಾಕಿಸ್ತಾನ ಮೂಲದ ಪಿತೂರಿಗಾರರು ಸ್ಥಳೀಯ ಉಗ್ರ ಆದಿಲ್ ಹುಸೇನ್ ಮಿರ್ ಜೊತೆಗೆ ಪಾಕಿಸ್ತಾನದ ಲಷ್ಕರ್-ಎ-ತಯಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಕಳುಹಿಸಿದ್ದರು. 2018ರಿಂದ ಪಾಕಿಸ್ತಾನದಲ್ಲಿದ್ದ ಆದಿಲ್ ಹುಸೇನ್ ಅನಂತ್ನಾಗ್ನ ಪಹಲ್ಗಾಮ್ ಮೂಲದವನು. ಮೂವರೂ ಉಗ್ರರು ಯಾತ್ರೆಯ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದರು ಎಂದು ತಿಳಿಸಿದ್ದಾರೆ.